ವಿಶಿಷ್ಟ ನಟರಾಗಿ ಪ್ರಸಿದ್ಧರಾಗಿ, ತಮ್ಮ ಸ್ಫುಟವಾದ ಕನ್ನಡ ಭಾಷಾ ಪ್ರಯೋಗಗಳ ಮೂಲಕ ಗಮನ ಸೆಳೆದಿರುವವರು ಸುಚೇಂದ್ರ ಪ್ರಸಾದ್ (Suchendra Prasad). ಅವರು `ಮಾವು ಬೇವು’ (Maavu Bevu) ಎಂಬ ಸದಭಿರುಚಿಯ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದು, ಈಗಾಗಲೇ ಅನೇಕ ಬಗೆಗಳಲ್ಲಿ ಸುದ್ದಿಯಾಗಿದೆ. `ಮಾವು ಬೇವು’ ಇದೇ ಏಪ್ರಿಲ್ 21ರಂದು ಬಿಡುಗಡೆಗೊಳ್ಳಲಿದೆ. ಸುಚೇಂದ್ರ ಪ್ರಸಾದ್ ಸಾರಥ್ಯ ವಹಿಸಿದ್ದಾರೆಂದ ಮೇಲೆ ಮಾವು ಬೇವಿನ ಬಗ್ಗೆ ತಾನೇ ತಾನಾಗಿ ಕುತೂಹಲವೊಂದು ಮೂಡಿಕೊಳ್ಳುತ್ತದೆ. ಅದನ್ನು ತಣಿಸುತ್ತಲೇ, ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಬಲ್ಲ ಒಂದಷ್ಟು ವಿಚಾರಗಳೀಗ ಚಿತ್ರತಂಡದ ಕಡೆಯಿಂದ ಹೊರಬಿದ್ದಿವೆ.
ಕನ್ನಡ ಚಿತ್ರರಂಗ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಗುಂಗಿಗೆ ಬಿದ್ದಿದೆ. ಇದರ ನಡುವಲ್ಲಿಯೇ ಒಂದಷ್ಟು ಭಿನ್ನವಾದ, ಪ್ರಯೋಗಾತ್ಮಕ ಗುಣಗಳನ್ನು ಹೊಂದಿರುವ ಮೌಲಿಕ ಚಿತ್ರಗಳೂ ಕೂಡಾ ತಯಾರಾಗುತ್ತಿವೆ. ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರ್ಪಡೆಗೊಳ್ಳುವ ಚಿತ್ರ `ಮಾವು ಬೇವು’. ಈ ಚಿತ್ರ ತನ್ನೊಡಲಲ್ಲಿ ಅದೆಷ್ಟೋ ಅಚ್ಚರಿಗಳನ್ನು ಬಚ್ಚಿಟ್ಟುಕೊಂಡಿದೆ. ಆ ವಿವರಗಳೆಲ್ಲವೂ ಈ ಸಿನಿಮಾ ಪ್ರೇಕ್ಷಕರ ಪಾಲಿಗೆ ಭಿನ್ನ ಅನುಭೂತಿಯೊಂದನ್ನು ಧಾರಾಳವಾಗಿ ಕೊಡಮಾಡುವ ಲಕ್ಷಣಗಳನ್ನೇ ಧ್ವನಿಸುವಂತಿವೆ.
ನಿಮಗೆಲ್ಲ ಗೊತ್ತಿಲ್ಲದಿರುವುದೇನಲ್ಲ. ಒಂದು ಸಿನಿಮಾ ತಯಾರಾದರೆ, ಆ ಕಥೆಯ, ಸನ್ನಿವೇಶದ ಭಾವಗಳಿಗೆ ತಕ್ಕಂತೆ ಹಾಡುಗಳನ್ನು ಸೃಷ್ಟಿಸಲಾಗುತ್ತದೆ. ಆದರೆ, ಜನಪ್ರಿಯಗೊಂಡು, ಜನರ ಮನಗೆದ್ದ ಹಾಡುಗಳಿಗಾಗಿಯೇ ಕಥೆ ಸೃಷ್ಟಿಯಾದ ಬೆರಗು ಈ ಹಿಂದೆಂದೂ ನಿಮ್ಮನ್ನು ಎದುರುಗೊಂಡಿರಲು ಸಾಧ್ಯವಿಲ್ಲ. 70-80ರ ದಶಕದಲ್ಲಿ ಹಾಡುಗಳೆಂದರೆ ಹುಚ್ಚೇಳುವ, ಮುದಗೊಳ್ಳುವ ಕಾಲಮಾನವೊಂದಿತ್ತು. ಅಂಥಾ ಘಳಿಗೆಯಲ್ಲಿ ಕನ್ನಡದ ಮೇರು ಕವಿ ದೊಡ್ಡರಂಗೇಗೌಡರು (Dodarange Gowda), ಪ್ರಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರುಗಳಾದ ಅಶ್ವತ್ಥ್-ವೈದಿ ಜೋಡಿಯ ಸಮಾಗಮ ಸಂಭವಿಸಿತ್ತು. ಈ ಪ್ರತಿಭಾನ್ವಿತ ಕನಸುಗಾರರ ಸಮ್ಮಿಲನದಿಂದಲೇ ಮಾವು ಬೇವು ಎಂಬ ಗೀತ ಗುಚ್ಛವೊಂದು ಹೊರ ಬಂದಿತ್ತು. ಅದು ಇತಿಹಾಸದ ಪುಟಗಳಲ್ಲಿ ದಾಖಲಾಗುವಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿತ್ತು.
ಅಂತಹ ಗೀತ ಗುಚ್ಛವನ್ನು ಸಿನಿಮಾ ರೂಪಕ್ಕೆ ತರಬೇಕೆಂದು ಸಿ ಅಶ್ವತ್ಥ್, ಬಾಲಸುಬ್ರಮಣ್ಯಂ, ದೊಡ್ಡರಂಗೇಗೌಡರು ನಲವತ್ತು ವರ್ಷಗಳಿಂದಿಚೆಗೆ ಬಹುವಾಗಿ ಪ್ರಯತ್ನಿಸಿದ್ದರು. ಕಡೆಗೂ ಎಲ್ಲ ಕೊಂಡಿಗಳೂ ಕಳಚಿಕೊಂಡು, ಏಕಾಂಗಿಯಾಗಿ ನಿಂತರೂ ಕೂಡಾ ದೊಡ್ಡರಂಗೇಗೌಡರು ಈ ಪ್ರಯತ್ನದಿಂದ ಹಿಂದೆ ಸರಿದಿರಲಿಲ್ಲ. ಈಗ್ಗೆ ಹತ್ತು ವರ್ಷಗಳಿಂದ ಹಿಂದೆ ಈ ವಿಚಾರ ತಲುಪಿದರೂ ಕೂಡಾ ಸುಚೇಂದ್ರ ಪ್ರಸಾದ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಬಹುಶಃ ಅವರಲ್ಲದೇ ಬೇರಾರೂ ಈ ಸಾಹಸವನ್ನು ಎದುರುಗೊಳ್ಳೋದು ಕಷ್ಟವಿತ್ತು. ಕಡೆಗೂ ಒಂದು ಸುಸಜ್ಜಿತವಾದ ತಂಡದೊಂದಿಗೆ ಅಂದುಕೊಂಡಂತೆಯೇ ಸಿನಿಮಾ ಮಾಡಿದ ಖುಷಿ ಸುಚೇಂದ್ರ ಪ್ರಸಾದ್ ಅವರಲ್ಲಿದೆ.
ಸಂಬಂಧಗಳು, ಅದರ ಮೌಲ್ಯಗಳು ಸೇರಿದಂತೆ ಬದುಕಿಗೆ ಹತ್ತಿರಾದ ಅಂಶಗಳೊಂದಿಗೆ ಸುಚೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗಾಗಿಯೇ ಕಥೆ ಸೃಷ್ಟಿಸಿ, ಸಿನಿಮಾ ಮಾಡುವಲ್ಲಿ ಗೆದ್ದಿದ್ದಾರೆ. ಈ ಹಂತದಲ್ಲಿ ಲಹರಿ ಸಂಸ್ಥೆಯ ವೇಲು ಅವರು ಅತ್ಯಂತ ಪ್ರೀತಿಯಿಂದ ಆಡಿಯೋ ಹಕ್ಕುಗಳನ್ನು ನೀಡುವ ಮೂಲಕ ಜೊತೆಯಾಗಿದ್ದಾರೆ. ಸುಚೇಂದ್ರ ಪ್ರಸಾದ್ ಅವರನ್ನು ಗುರುವೆಂದೇ ಗೌರವಿಸುವ ಬಾಹುಬಲಿ ಖ್ಯಾತಿಯ ಡ್ಯಾನಿ ಕುಟ್ಟಪ್ಪ ಈ ಸಿನಿಮಾದಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಈ ಸಿನಿಮಾವನ್ನು ವೀಕ್ಷಿಸಿರುವ ಚಿತ್ರರಂಗದ ಗಣ್ಯರು, ಸಾಹಿತ್ಯ ಲೋಕದ ದಿಗ್ಗಜರೆಲ್ಲ ಮೆಚ್ಚಿ ಕೊಂಡಾಡಿದ್ದಾರೆ.
ಹಿರಿಯ ಕವಿ ಬಿ.ಆರ್ ಲಕ್ಷ್ಮಣ ರಾವ್ ಸುದೀರ್ಘವಾದ ಪತ್ರ ಬರೆಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಬಹುಶಃ ಎಸ್.ರಾಜಶೇಖರ್ ಅವರು ಮನಸು ಮಾಡದೇ ಹೋಗಿದ್ದರೆ ಇಂಥಾದ್ದೊಂದು ಚಿತ್ರ ಪ್ರೇಕ್ಷಕರ ಪಾಲಿಗೆ ಮರೀಚಿಕೆಯಾಗಿ ಉಳಿಯುತ್ತಿತ್ತು. ರಾಜಶೇಖರ್ ಅವರು ಅತ್ಯಂತ ಆಸ್ಥೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್ ಅವರ ಕನಸಿಗೆ ಜೊತೆಯಾಗಿದ್ದಾರೆ. ಒಟ್ಟಾರೆಯಾಗಿ ಮಾವು ಬೇವು ಕನ್ನಡದ ಪ್ರೇಕ್ಷಕರಿಗೆ ಹೊಸಾ ಬಗೆಯ ಅನುಭೂತಿಯನ್ನು ಕೊಡಮಾಡಲಿರುವುದು ನಿಜ. ಹಿರಿಯ ನಟ ಶ್ರೀನಿವಾಸ ಮೂರ್ತಿ , ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರ ಎಚ್.ಜಿ, ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್ ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.