Connect with us

Bengaluru City

ಭರಾಟೆ ಶೂಟಿಂಗ್ ವೇಳೆ ಮೇಲುಕೋಟೆ ಕಲ್ಯಾಣಿ ಅಶುಚಿತ್ವ – ಶ್ರೀ ಮುರುಳಿ ಸ್ಪಷ್ಟನೆ

Published

on

ಬೆಂಗಳೂರು: ಈ ವಾರ ನಟ ಶ್ರೀ ಮುರುಳಿ ನಟಿಸುತ್ತಿರುವ `ಭರಾಟೆ’ ಚಿತ್ರ ಶೂಟಿಂಗ್ ಮೇಲುಕೋಟೆಯ ಕಲ್ಯಾಣಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿತ್ತು. ಈ ವೇಳೆ ಕಲ್ಯಾಣಿ ಅಶುಚಿತ್ವವಾಗಿದೆ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದರು. ಈಗ ಅಭಿಮಾನಿಯ ಪ್ರಶ್ನೆಗೆ ನಟ ಶ್ರೀ ಮುರುಳಿಯವರು ಸ್ಪಷ್ಟನೆ ಕೊಟ್ಟಿದ್ದಾರೆ.

ಭರಾಟೆ ಚಿತ್ರಿಕರಣದ ವೇಳೆ ಅಶುಚಿತ್ವವಾಗಿದ್ದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದರಿಂದ ನಮೋ ಹಿಂದುಸ್ತಾನಿ ಎಂಬವರು ಅಶುಚಿತ್ವವಾಗಿರುವ ಕಲ್ಯಾಣಿಯ ಫೋಟೋ ಹಾಕಿ “ಭರಾಟೆ ಚಿತ್ರ ತಂಡ, ಸಿನಿಮಾ ಬರುತ್ತಿರುವುದಕ್ಕೆ ಖುಷಿ ಇದೆ. ಹಾಗಂತ ನೀವು ಚಿತ್ರೀಕರಣ ಸಮಯದಲ್ಲಿ ಮೇಲುಕೋಟೆ ಕಲ್ಯಾಣಿ ಸುತ್ತಮುತ್ತ ಮಾಡಿರುವ ಅಶುಚಿತ್ವಕ್ಕೆ ಯಾರು ಹೊಣೆ. ಶ್ರೀ ಮುರುಳಿಯವರೇ ನಿಮ್ಮ ಚಿತ್ರತಂಡದವರೆಲ್ಲ ಸೇರಿ ಕಲ್ಯಾಣಿ ಸ್ವಚ್ಛತಾ ಕಾರ್ಯ ಮಾಡಿ” ಎಂದು ಟ್ವೀಟ್ ಮಾಡಿದ್ದರು.

ಅಭಿಮಾನಿ ಟ್ವೀಟ್ ಗೆ ನಟ ಶ್ರಿಮುರುಳಿಯವರು,”ನಿಮ್ಮ ಪ್ರೀತಿಗೆ ಧನ್ಯವಾದಗಳು. ಕೆಲಸದ ಸಮಯದಲ್ಲಿ ವಾತಾವರಣ ಹೀಗೆ ಆಗಿರಬಹುದು. ಕ್ಷಮಿಸಿ, ಆದರೆ ನಮ್ಮ ಕೆಲಸದ ಮುನ್ನ ಈ ಜಾಗವನ್ನು ಸ್ವಚ್ಛ ಮಾಡುವಾಗ ನಮಗೆ ಕಂಡದ್ದು ಬೇರೆಯೇ. ತುಂಬಾ ಕೆಟ್ಟದಾಗಿ ನಿರ್ವಹಣೆ ಮಾಡಲಾಗಿತ್ತು. ಹಾಗೆ ನಮ್ಮ ಕೆಲಸದ ನಂತರ ಈ ಜಾಗವನ್ನು ನಾವು ಕ್ಲೀನ್ ಮಾಡಿರುವ ಫೋಟೋಗಳನ್ನು ಶೇರ್ ಮಾಡುತ್ತೇನೆ. ಚಿಂತೆ ಮಾಡಬೇಡಿ” ಎಂದು ರೀಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಅಭಿಮಾನಿ, ಭರಾಟೆ ಚಿತ್ರತಂಡ ಮೇಲುಕೋಟೆಯಲ್ಲಿ ಕೆಲವು ಸ್ಥಳಗಳನ್ನು ಹಾಳು ಮಾಡಿವೆ ಎಂಬ ಸುದ್ದಿಯನ್ನು ನೋಡಿದೆ. ಆದ್ದರಿಂದ ನಮಗೆ ಸತ್ಯ ಗೊತ್ತಾಗಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮುರಳಿಯವರು, “ಯಾವ ಕಾರಣಕ್ಕೂ ಇಲ್ಲ. ನಿಜ ಹೇಳಬೇಕು ಎಂದರೆ ಈ ಜಾಗವನ್ನು ನಮ್ಮ ಚಿತ್ರತಂಡ ಸ್ವಚ್ಛ ಮಾಡಿತ್ತು. ಚಿತ್ರಿಕರಣ ಆದಮೇಲು ಸಹ ನಾವೇ ಕ್ಲೀನ್ ಮಾಡಿದ್ದೇವೆ. ಆಗ ಅಲ್ಲಿನ ಸ್ಥಳೀಯರು ಹೀಗೂ ಸ್ವಚ್ಛವಾಗಿ ನೋಡಿಕೊಳ್ಳಬಹುದು ಎಂದು ಪ್ರಶಂಸಿದರು. ಸ್ವಚ್ಛವಾಗಿರದ ಫೋಟೊಗಳನ್ನು ಶೇರ್ ಮಾಡಬೇಡಿ” ಎಂದು ಹುಡುಗರಿಗೆ ಹೇಳಿದ್ದಾರೆ.

ಏನಿದು ಆರೋಪ?
`ಭರಾಟೆ’ ಚಿತ್ರತಂಡ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡು ನವೆಂಬರ್ 11 ರಿಂದ 14ರವರೆಗೆ ಶೂಟಿಂಗ್ ಮಾಡಲು ಸರ್ಕಾರಕ್ಕೆ 96 ಸಾವಿರ ರೂ. ಬಿಲ್ ಪಾವತಿಸಲಾಗಿತ್ತು. ಅನುಮತಿ ಪಡೆದುಕೊಂಡಿರುವ ಚಿತ್ರತಂಡಕ್ಕೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಚಿತ್ರೀಕರಣ ಮಾಡಿ ಎಂದೂ ಹೇಳಲಾಗಿದ್ದರೂ ಚಿತ್ರತಂಡ ಕಲ್ಯಾಣಿಯ ತುಂಬಾ ಕೇಸರಿ ಬಣ್ಣದ ಬಟ್ಟೆಗಳನ್ನ ಕಟ್ಟಿ ಕೇಸರಿಕರಣ ಮಾಡಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.

ಜೊತೆಗೆ ಕಲ್ಯಾಣಿಯಲ್ಲೇ ವಿಶೇಷವಾದ ಸೆಟ್ ಹಾಕಿದ್ದು ಚೌಡೇಶ್ವರಿ ದೇವಿ ವಿಗ್ರಹವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿತ್ತು. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದು ಶಕ್ತಿ ಕೇಂದ್ರವಾಗಿರುವ ಮೇಲುಕೋಟೆಯಲ್ಲಿ, ತಾತ್ಕಾಲಿಕವಾಗಿಯಾದರೂ ಬೇರೊಂದು ಶಕ್ತಿ ದೇವರನ್ನ ಪ್ರತಿಷ್ಠಾಪಿಸಿದರೆ ಮೂಲ ದೇವರ ಶಕ್ತಿ ಕುಂದುಂಟಾಗುತ್ತದೆ. ಅದು ತಕ್ಷಣ ಪರಿಣಾಮ ಬೀರದೇ ಇದ್ದರೂ ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ ಎಂದು ದೇವಾಲಯದ ಅರ್ಚಕ ಸಂಪತ್ ಕುಮಾರ್ ಹೇಳಿದ್ದರು.

ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷದ ಪ್ರತೀ ದಿನವೂ ಒಂದಲ್ಲಾ ಒಂದು ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ. ಹೀಗೆ ನಡೆಯುವ ಪೂಜೆಗಳಿಗೆ ಪವಿತ್ರ ಕಲ್ಯಾಣಿಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಲಾಗುತ್ತದೆ. ದೇವಾಲಯ ಮಾತ್ರವಲ್ಲದೆ ಕಲ್ಯಾಣಿಯಲ್ಲೂ ಹಲವು ದೇವರುಗಳಿದ್ದು ಎಲ್ಲಾ ದೇವರಿಗೂ ಪೂಜೆ ಅಭಿಷೇಕ ಮಾಡಬೇಕಾಗುತ್ತದೆ. ಹಾಗೆಯೇ ಕಳೆದ ಭಾನುವಾರ ಮೇಲುಕೋಟೆ ದೇವಾಲಯಕ್ಕೆ ಸಂಬಂಧ ಪಟ್ಟಂತಹ, ಮಹಾಮುನಿ ಜೀಯರ್ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅಭಿಷೇಕ ನಡೆಯಬೇಕಾಗಿತ್ತು. ಕಲ್ಯಾಣಿಯಿಂದ ನೀರನ್ನು ತಂದು ಅಭಿಷೇಕ ನೆರವೇರಿಸಬೇಕಿತ್ತು. ಆದರೆ ಕಲ್ಯಾಣಿಯ ಬಳಿ ಚಿತ್ರ ತಂಡ ಸೆಟ್ ಹಾಕಿದ್ದರಿಂದ, ಕಳೆದ 600 ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದ ಅಭಿಷೇಕಕ್ಕೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in