ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ತಮಗೆ ಜೀವ ಬೆದರಿಕೆ ಹಾಗೂ ನಿಂದನೆ ಮಾಡಿದ್ದಾರೆ ಎಂದು ನಟಿ ಸೋಮಶೇಖರ್ ನಿನ್ನೆಯಷ್ಟೇ ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಯನಾ, ಪ್ರಚಾರಕ್ಕಾಗಿ ಸೋಮಶೇಖರ್ ಹೀಗೆಲ್ಲ ಮಾಡುತ್ತಿದ್ದಾನೆ. ಅಥವಾ ಅವನ ಹಿಂದೆ ಯಾರೂ ನಿಂತು ಈ ರೀತಿ ಮಾಡಿಸುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೂರು ಆಡಿಯೋಗಳು ವೈರಲ್ ಆಗಿದ್ದು, ನಯನಾ ಸಭ್ಯವಲ್ಲದ ಪದಗಳನ್ನು ಆಡಿದ್ದಾರೆ. ‘ನಾನು ಎಂಥವಳು ಅಂತ ನಿನಗೆ ಗೊತ್ತಿಲ್ಲ. ಬೆಂಗಳೂರಿಗೆ ಬಂದ ಮೇಲೆ ನನ್ನನ್ನು ನೀನು ಕಾಣದೇ ಇದ್ದರೆ, ನಾನು ಏನು ಅಂತ ತೋರಿಸ್ತೇನೆ. ನಾನು ಏನು ಮಾಡಬಹುದು ಅಂತ ಅಂದಾಜು ನಿನಗಿರಲ್ಲ’ ಎಂದು ಧಮಕಿ ಕೂಡ ಹಾಕಿದ್ದಾರೆ. ಅಲ್ಲದೇ, ಮಾತಿನ ಮಧ್ಯ ಒಂದೊಂದು ಅಸಭ್ಯ ಪದಗಳನ್ನೂ ಬಳಸುತ್ತಾರೆ. ಈ ಆಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ
ಹಣದ ಹಂಚಿಕೆ ವಿಚಾರಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಆರೋಪ ಮಾಡಿದ್ದು, ಜೀವ ಬೆದರಿಕೆ ಮತ್ತು ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ನಯನಾ ಮತ್ತು ಟೀಮ್ ಬಹುಮಾನವಾಗಿ 3 ಲಕ್ಷ ರೂಪಾಯಿ ಹಣ ಪಡೆದಿತ್ತು. ಈ ತಂಡದಲ್ಲಿ ಸೋಮಶೇಖರ್ ಕೂಡ ಇದ್ದ. ಈ ಹಣದಲ್ಲಿ ಸರಿಯಾದ ಪಾಲು ಆಗಿಲ್ಲ ಎನ್ನುವ ಕಾರಣಕ್ಕಾಗಿ ಸೋಮಶೇಖರ್ ಮತ್ತು ನಯನಾ ಮಧ್ಯ ಮನಸ್ತಾಪ ಆಗಿತ್ತು ಎಂದು ಹೇಳಲಾಗುತ್ತಿದೆ.
ನಯನಾರ ಧ್ವನಿ ಎಂದು ಹೇಳಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸೋಮಶೇಖರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಪೊಲೀಸರು ಬಂದು ನಿನ್ನ ಅರೆಸ್ಟ್ ಮಾಡುತ್ತಾರೆ. ನಾನು ಸ್ಟೇಶನ್ ನಲ್ಲೇ ಇದ್ದೇನೆ. ನೀನು ಹಣ ಕೊಡದೇ ಇದ್ದರೆ, ನಿನ್ನನ್ನು ಏನು ಬೇಕಾದರೂ ಮಾಡುವುದಕ್ಕೆ ರೆಡಿ ಎಂದು ನಯನಾರ ಧ್ವನಿ ಎಂದು ಹೇಳಲಾದ ಆಡಿಯೋದಲ್ಲಿ ಅವಾಜ್ ಹಾಕುವಂತಹ ಮಾತುಗಳು ಇವೆ.
ನಯನಾ ಆರೋಪದಲ್ಲಿ ಹುರುಳಿಲ್ಲ. ನಾನು ಯಾರಿಗೂ ಹಣ ಕೊಡಬೇಕಾಗಿಲ್ಲ. ಚಾನಲ್ ಹೇಳಿದಂತೆ ನಾನು ಮಾಡಿದ್ದೇನೆ. ಆದರೆ, ನಯನಾ ಹಣದ ವಿಚಾರವಾಗಿ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ ಸೋಮಶೇಖರ್. ಸದ್ಯ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಲಾಗಿದೆ.