ಜನಪ್ರಿಯ ಹಾಸ್ಯ ನಟ ಸತೀಶ್ ಶಾ (74) ಅವರು ಶನಿವಾರ ನಿಧನರಾದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಟ ಸತೀಶ್ ಶಾ ಅವರ ನಿಧನ ಸುದ್ದಿಯನ್ನು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ದೃಢಪಡಿಸಿದ್ದಾರೆ. ‘ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ. ನಮ್ಮ ಸ್ನೇಹಿತ ಮತ್ತು ನಟ ಸತೀಶ್ ಶಾ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು ಎಂದು ನಾನು ಹೇಳಲು ಬಯಸುತ್ತೇನೆ. ಅವರು ಮನೆಯಲ್ಲಿದ್ದಾಗ ಆರೋಗ್ಯ ಹದಗೆಟ್ಟಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಬದುಕಲು ಸಾಧ್ಯವಾಗಲಿಲ್ಲ. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಇದು ಸಿನಿಮಾರಂಗಕ್ಕೆ ಬಹಳ ದೊಡ್ಡ ನಷ್ಟ. ನಾನು ಅವರೊಂದಿಗೆ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ್ದೇನೆ. ಪಿಯೂಷ್ ಪಾಂಡೆ ಅವರ ಅಂತ್ಯಕ್ರಿಯೆ ಮುಗಿಸಿ ಹಿಂತಿರುಗುತ್ತಿದ್ದಾಗ, ಸತೀಶ್ ಅವರ ನಿಧನದ ವಾರ್ತೆ ತಿಳಿಯಿತು’ ಎಂದು ಅಶೋಕ್ ಪಂಡಿತ್ ತಿಳಿಸಿದ್ದಾರೆ.
ಸತೀಶ್ ಶಾ ಭಾರತೀಯ ಜನಪ್ರಿಯ ನಟ. ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ವಿಶೇಷವಾಗಿ ಹಾಸ್ಯ ಪಾತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. 1951 ರ ಜೂನ್ 25 ರಂದು ಬಾಂಬೆಯಲ್ಲಿ ಜನಿಸಿದರು. 1978 ರಲ್ಲಿ ಅರವಿಂದ್ ದೇಸಾಯಿ ಕಿ ಅಜೀಬ್ ದಸ್ತಾನ್ ಚಿತ್ರದ ಮೂಲಕ ಶಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು 1983 ರ ವಿಡಂಬನಾತ್ಮಕ ಜಾನೆ ಭಿ ದೋ ಯಾರೋದಲ್ಲಿ ಮುನ್ಸಿಪಲ್ ಕಮಿಷನರ್ ಡಿ’ಮೆಲ್ಲೋ ಪಾತ್ರ ನಿರ್ವಹಿಸಿ ಖ್ಯಾತಿ ಗಳಿಸಿದರು.
ಹಮ್ ಸಾಥ್ ಸಾಥ್ ಹೈ (1999), ಕಲ್ ಹೋ ನಾ ಹೋ (2003), ಮುಜ್ಸೆ ಶಾದಿ ಕರೋಗಿ (2004), ಮತ್ತು ಓಂ ಶಾಂತಿ ಓಂ (2007) ಸೇರಿದಂತೆ 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1984 ರ ಸಿಟ್ಕಾಂ ಯೇ ಜೊ ಹೈ ಜಿಂದಗಿ ಮೂಲಕ ದೂರದರ್ಶನದಲ್ಲಿ ಅವರು ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು.
ನಂತರ ಅವರು ಫಿಲ್ಮಿ ಚಕ್ಕರ್ (1995) ಮತ್ತು ಸಾರಾಭಾಯ್ ವರ್ಸಸ್ ಸಾರಾಭಾಯ್ (2004) ಸೇರಿದಂತೆ ಹಲವಾರು ಜನಪ್ರಿಯ ಸರಣಿಗಳಲ್ಲಿ ಕಾಣಿಸಿಕೊಂಡರು. ಇಂದ್ರವಧನ್ ಸಾರಾಭಾಯ್ ಪಾತ್ರವು ಇನ್ನೂ ಜನಪ್ರಿಯತೆ ತಂದುಕೊಟ್ಟಿತು.

