`ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್

Public TV
2 Min Read
Puttakkana Makkalu 1

ಜೀ಼ ಕನ್ನಡ ವಾಹಿನಿಯಲ್ಲಿ ಸಂಜೆ 6-30 ಕ್ಕೆ ಪ್ರಸಾರವಾಗುವ ಅತ್ಯಂತ ಯಶಸ್ವಿ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu). ಪ್ರಸಾರದ ಮೊದಲ ವಾರದಲ್ಲಿ ಅತೀ ಹೆಚ್ಚು ಕನ್ನಡಿಗರ ಮನಸುಗಳನ್ನ ಗೆದ್ದ ಖ್ಯಾತಿ ಈ ಧಾರಾವಾಹಿಯದು. ಇದೀಗ 900 ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ನಟ ರವಿಚಂದ್ರನ್ ಧಾರಾವಾಹಿಗೆ ಎಂಟ್ರಿ ಕೊಟ್ಟು ಕುತೂಹಲ ಮೂಡಿಸಿದ್ದಾರೆ.

Puttakkana Makkalu 3

‘ಹೆಣ್ಣು ಮಕ್ಕಳ ಹೆತ್ತೋರು ಎಲ್ಲ ದೇವರಿಗು ದೊಡ್ಡೋರು’ ಅನ್ನುವ ಈ ಧಾರಾವಾಹಿಯ ಹಾಡಿನ ಸಾಲು ಪುಟ್ಟಕ್ಕನ ಕತೆಯ ಸಾರವನ್ನು ತೋರಿಸುತ್ತದೆ. ಗಂಡು ಮಗು ಆಗಿಲ್ಲ ಅನ್ನುವ ಕಾರಣಕ್ಕೆ ಗಂಡ ಗೋಪಾಲ ಪುಟ್ಟಕ್ಕನನ್ನು ಬಿಟ್ಟು ಹೋಗುತ್ತಾನೆ. ತಂದೆ ಇಲ್ಲದೆ ತಬ್ಬಲಿಯಾದ ಮೂರು ಹೆಣ್ಣು ಮಕ್ಕಳನ್ನು ಹೆಗಲಿಗೆ ಕಟ್ಟಿಕೊಂಡು, ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ದಿಟ್ಟ ಮಹಿಳೆಯ ಕಥೆಯೇ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ.

Puttakkana Makkalu 2

ಧಾರಾವಾಹಿಯ ಮುಖ್ಯ ಪಾತ್ರವಾದ ‘ಪುಟ್ಟಕ್ಕ’ನ ಪಾತ್ರವನ್ನು ಕನ್ನಡದ ಖ್ಯಾತ ನಟಿ ಉಮಾಶ್ರೀ (Umashree) ಮಾಡುತ್ತಿದ್ದಾರೆ. ಪುಟ್ಟಕ್ಕನಿಗೆ ಜೊತೆಯಾಗಿ ನಿಂತವರು ಮಗಳು ಸಹನಾ, ಸ್ನೇಹಾ, ಸುಮಾ. ಗೆಳತಿ ಬಂಗಾರಮ್ಮ. ಅಳಿಯ ಕಂಠಿ ಮತ್ತಿತರ ಪಾತ್ರ. ಇದೀಗ ಈ ಧಾರಾವಾಹಿ ಮಹತ್ತರ ಘಟ್ಟದಲ್ಲಿ ಬಂದು ನಿಂತಿದೆ. ತನ್ನ ಆಸೆ, ಕನಸಿನಂತೆ ಜಿಲ್ಲಾಧಿಕಾರಿ ಆಗಿದ್ದ ಸ್ನೇಹಾ, ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಳು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ನಿಧನದ ಬಳಿಕವೂ ಅವ್ಯವಹಾರದ ಆರೋಪ ಬಂದಿದ್ದು, ಮಗಳ ಪರವಾಗಿ ಪುಟ್ಟಕ್ಕ ಹೋರಾಟಕ್ಕೆ ಮುಂದಾಗಿದ್ದಾಳೆ.

Puttakkana Makkalu 4

ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಗಳಿಗೆ ಅಂಟಿದ ಕಳಂಕ ತೊಳೆಯುವ ಈ ಕಾರ್ಯಕ್ಕೆ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗೆ ಬೇಸತ್ತಿರುವ ಪುಟ್ಟಕ್ಕನಿಗೆ ಸಾಥ್ ಕೊಡಲು ‘ಕ್ರೇಜಿ ಸ್ಟಾರ್ ರವಿಚಂದ್ರನ್’ ಮುಂದಾಗಿದ್ದಾರೆ. ಜಸ್ಟಿಸ್ ಫಾರ್ ಸ್ನೇಹಾ ಹೋರಾಟಕ್ಕೆ ಪುಟ್ನಂಜ ಕೈ ಜೋಡಿಸಿದ್ದಾರೆ.

ಪುಟ್ನಂಜ ಸಿನಿಮಾದಲ್ಲಿ ಮೊಡಿ ಮಾಡಿದ್ದ ಉಮಾಶ್ರೀ ಮತ್ತು ರವಿಚಂದ್ರನ್ (Ravichandran), ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಅವರಿಂದ ಪುಟ್ಟಕ್ಕನ ಹೋರಾಟಕ್ಕೆ ನ್ಯಾಯ ಸಿಗುತ್ತಾ? ಮಗಳಿಗೆ ಅಂಟಿದ ಕಳಂಕ ಹೋಗುತ್ತಾ?  ಅನ್ನೋದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

Share This Article