Connect with us

Cinema

ಸಾಂಸ್ಕೃತಿಕ ನಗರದಲ್ಲಿ ದೊಡ್ಮನೆ ಮನೆಯ ಅದ್ಧೂರಿ ನಿಶ್ಚಿತಾರ್ಥ ಸಂಭ್ರಮ!

Published

on

ಮೈಸೂರು: ಸ್ಯಾಂಡಲ್‍ವುಡ್ ದೊಡ್ಮನೆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪುತ್ರ ನಿಶ್ಚಿತಾರ್ಥ ನಡೆದಿದೆ.

ಯುವರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿ ಎಂಗೇಜ್ ಆಗಿದ್ದಾರೆ. ಯುವ ಹಾಗೂ ಶ್ರೀದೇವಿ ಉಂಗುರ ಬದಲಾವಣೆ ವೇಳೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು.

ಇಂದು ಬೆಳಗ್ಗೆ 11 ಗಂಟೆಗೆ ಸಂಪ್ರದಾಯದ ಪ್ರಕಾರ ಕಾರ್ಯಕ್ರಮ ನೇರವೇರಿದೆ. ಈ ಕಾರ್ಯಕ್ರಮಕ್ಕೆ ರಾಜ್ ಕುಟುಂಬಸ್ಥರು ಕೇವಲ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು. ಇನ್ನೂ ಈ ಕಾರ್ಯಕ್ರಮದಲ್ಲಿ ನಲಪಾಡ್ ದಾಳಿಯಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಕೂಡ ಕಾಣಿಸಿಕೊಂಡಿದ್ದರು. ಹಲ್ಲೆಗೊಳಗಾಗಿದ್ದ ವಿದ್ವತ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ತನ್ನ ಬಾಲ್ಯ ಸ್ನೇಹಿತನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಟ ಶಿವರಾಜ್‍ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್ ಭಾಗಿಯಾಗಿದ್ದರು. ಈ ಸಮಾರಂಭಕ್ಕೆ ಅದ್ಧೂರಿ ವೇದಿಕೆ ಹಾಗೂ ಭಾರೀ ಭೋಜನವನ್ನು ಸಿದ್ಧಪಡಿಸಲಾಗಿತ್ತು.

ಶಿವರಾಜ್‍ಕುಮಾರ್ ಮಾತನಾಡಿ, ಕುಟುಂಬದಲ್ಲಿ ಕಾರ್ಯಕ್ರಮ ನೆರವೇರಿದರೆ ಯಾವಾಗಲೂ ಸಂತೋಷವೇ ಆಗುತ್ತದೆ. ಮೈಸೂರಿನ ಮಗಳು ನಮ್ಮ ಮನೆ ಸೇರಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಶ್ರೀದೇವಿ ಹಾಗೂ ಯುವನಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಮೈಸೂರಿಗೆ ಯುವರಾಜ್‍ಕುಮಾರ್, ರಾಜ್ ಕುಟುಂಬದ ಎರಡನೇ ಅಳಿಯ. ಹಾಗಾಗಿ ಮೈಸೂರಿಗೆ ಬರೋದಂದ್ರೆ ನಮಗೆಲ್ಲ ಖುಷಿ ಇದೆ. ನಮ್ಮ ಸಿನಿಮಾಗಳು ಹಾಗೂ ಅಪ್ಪಾಜಿ ಸಿನಿಮಾಗಳು ಇಲ್ಲೆ ಶೂಟಿಂಗ್ ಆಗುತ್ತಿದ್ದವು. ಜೊತೆಗೆ ನಮಗೆ ದಸರಾ ನೋಡಲು ತುಂಬಾ ಖುಷಿಯಾಗುತ್ತೆ. ಇದೀಗ ಮೈಸೂರಿನ ಮಗಳು ನಮ್ಮ ಮನೆಗೆ ಬರ್ತಿದ್ದಾರೆ ಇದು ಕೂಡ ಖುಷಿ ವಿಷಯ. ಇನ್ನಷ್ಟು ಸಂಬಂಧಗಳು ಮೈಸೂರಿನಿಂದ ಬೆಳೆಯಲಿ. ಇಂದು ಬೇರೆ ಏನೂ ವಿಶೇಷ ಇಲ್ಲ. ಜಸ್ಟ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಯುವ ಹಾಗೂ ಶ್ರೀದೇವಿಗೆ ನಟ ಶಿವರಾಜ್‍ಕುಮಾರ್ ಕಂಗ್ರಾಟ್ಸ್ ಎಂದರು.

ಡಾ. ರಾಜ್ ಸಮಾಧಿ ಬಳಿ ಯೋಗ ಕೇಂದ್ರ ನಿರ್ಮಾಣ ವಿಚಾರದ ಬಗ್ಗೆಯೂ ಮಾತನಾಡಿ, ನಾನು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದ್ದೆ. ಈ ಘೋಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದುಕೊಳ್ಳದೆ ಮಾತನಾಡಬಾರದು. ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಯಾವುದೇ ಸರ್ಕಾರ ಇರಲಿ ಒಳ್ಳೆದು ಮಾಡಿದ್ರೆ ಸಾಕು. ರೈತರ ಸಮಸ್ಯೆಗಳು ಏನಿದೆ ಅದನ್ನ ಬಗೆಹರಿಸಿದ್ರೆ ಸಾಕು. ಎಲ್ಲರಿಗೂ ಒಳ್ಳೆದು ಆದ್ರೆ ನಮಗೆ ಖುಷಿ ಎಂದರು.

ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಆದರೆ ತಮ್ಮ ಹೋಮ್ ಬ್ಯಾನರ್‍ನಲ್ಲಿ ಬರುವ ಚಿತ್ರಗಳ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ ಯುವ ಮದುವೆ ಆದ ನಂತರ ಹೀರೋ ಆಗಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗಿದೆ.

Click to comment

Leave a Reply

Your email address will not be published. Required fields are marked *