ಬೆಂಗಳೂರು: ನಟ ರಾಘವೇಂದ್ರ ರಾಜ್‍ಕುಮಾರ್ ಅವರು ಮನೆ ಕೆಲಸದವರ ಜೊತೆ ಊಟ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ರಾಘಣ್ಣ ಅವರು ತಮ್ಮ ಮನೆ ಕೆಲಸದವರ ಜೊತೆ ಹೋಟೆಲ್‍ನಲ್ಲಿ ಊಟ ಮಾಡಿದ್ದಾರೆ. ಈ ಬಗ್ಗೆ ಸ್ವತಃ ರಾಘಣ್ಣ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ರಾಘಣ್ಣ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಏನಿದೆ?
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಾನು ಹೊಸ ವರ್ಷವನ್ನು ನನ್ನ ದೊಡ್ಡ ಕುಟುಂಬದ ಜೊತೆ ಆಚರಿಸಿದ್ದೇನೆ. ಈ ಕುಟುಂಬ ಯಾರು ಎಂದರೆ ನಮ್ಮ ಮನೆಯಲ್ಲಿ ಕೆಲಸ ಮಾಡುವವರು, ಪಾತ್ರೆ ತೊಳೆಯುವವರು, ಕಾರು ಓಡಿಸುವವರು, ನನ್ನ ಸಹಾಯಕರು. ಇವರೆನ್ನೆಲ್ಲಾ ಹೋಟೆಲಿಗೆ ಕರೆದುಕೊಂಡು ಬಂದು ಒಟ್ಟಿಗೆ ಊಟ ಮಾಡಿದ್ದೇನೆ. ಈ ರೀತಿ ನಾನು ನನ್ನ ಹೊಸ ವರ್ಷವನ್ನು ಆಚರಿಸುತ್ತಿದ್ದೇನೆ.
ನಾವೆಲ್ಲಾ ನಮ್ಮ ಪತ್ನಿ, ಮಕ್ಕಳಿಗಿಂತ ಹೆಚ್ಚಾಗಿ ನಮ್ಮ ಜೊತೆ ಕೆಲಸ ಮಾಡುವವರನ್ನೇ ಜಾಸ್ತಿ ಕರೆಯುತ್ತೇವೆ. ನಮ್ಮ ಮೊಬೈಲ್ ತೆಗೆದು ನೋಡಿದರೆ ನಾವು ಅವರಿಗೆ ಜಾಸ್ತಿ ಕರೆ ಮಾಡುತ್ತೇವೆ. ಒಂದು ವರ್ಷಕ್ಕೆ 365 ದಿನ ಇದೆ, ಅದರಲ್ಲಿ 8,760 ಗಂಟೆ ಇದೆ. ಆ 8,760 ಗಂಟೆಯಲ್ಲಿ ಎರಡು ಗಂಟೆ ಅವರಿಗೆ ಕೊಡಿ ತುಂಬಾ ಖುಷಿಯಾಗುತ್ತೆ. ಅವರು ಯಾವಾಗಲೂ ನನಗೆ ಊಟ ಬಡಿಸುತ್ತಿರುತ್ತಾರೆ. ಈಗ ನಾನು ಅವರ ಜೊತೆ ಕುಳಿತು ಊಟ ಮಾಡಿದೆ ತುಂಬಾ ಖುಷಿಯಾಯಿತು.
ಇದನ್ನು ಮೊದಲು ನನ್ನ ತಂದೆ ಮಾಡುತ್ತಿದ್ದರು. ಈಗ ನಾನು ಮಾಡುತ್ತಿದ್ದೇನೆ, ಮುಂದೆ ನನ್ನ ಮಕ್ಕಳು ಇದನ್ನು ಮುಂದುವರಿಸುತ್ತಾರೆ. ನಾನು ಹಾಗೂ ನನ್ನ ಪತ್ನಿ ಮನೆ ಕೆಲಸದವರನ್ನು ಕರೆದುಕೊಂಡು ಹೋಗಿದ್ದೇವೆ. ಲೈಕ್ಸ್ ಹಾಗೂ ವ್ಯೂವ್ ಪಡೆಯಲು ನಾನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಿಲ್ಲ. ನಮ್ಮ ಪ್ರೀತಿ-ವಿಶ್ವಾಸವನ್ನು ಮನೆ ಕೆಲಸದವರ ಜೊತೆ ಹೇಗೆ ಇಟ್ಟುಕೊಳ್ಳಬೇಕು ಎಂದು ತೋರಿಸುವುದಕ್ಕೆ ಈ ವಿಡಿಯೋ ಪೋಸ್ಟ್ ಮಾಡಿದ್ದೇನೆ.
ನನ್ನ ರೆಸಲ್ಯೂಶನ್ ಎಂದರೆ ನನ್ನ ಪತ್ನಿ, ಮಕ್ಕಳು ಪ್ರತಿ ವರ್ಷ ಹೆಚ್ಚು ಹೆಚ್ಚಾಗಿ ಪ್ರೀತಿಸಬೇಕು ಎಂಬುದು ನನ್ನ ಆಸೆ. ಅಲ್ಲದೆ ಈ ವರ್ಷದಿಂದ ನಮ್ಮ ಕುಟುಂಬ ಪ್ಲಾಸ್ಟಿಕ್ ಬ್ಯಾನ್ ಮಾಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ನಾವು ನಮ್ಮ ತಂದೆಯ ಫೋಟೋ ಇರುವ ಬಟ್ಟೆಯ ಬ್ಯಾಗ್ ಅನ್ನು ಉಪಯೋಗಿಸುತ್ತಿದ್ದೇವೆ. ಹಾಗೆಯೇ ಎಲ್ಲರೂ ಪ್ಲಾಸ್ಟಿಕ್ ಬ್ಯಾನ್ ಮಾಡಿ ಬಟ್ಟೆ ಬ್ಯಾಗ್ ಉಪಯೋಗಿಸಿ ಎಂದು ರಾಘವೇಂದ್ರ ರಾಜ್‍ಕುಮಾರ್ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.