ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ಚಾಲೆಂಜ್ ಹುಟ್ಟಿಕೊಳ್ಳುತ್ತಿರುತ್ತವೆ. ಅದರಂತೆಯೇ ಇತ್ತೀಚೆಗಷ್ಟೆ ಬಾಟಲ್ ಕ್ಯಾಪ್ ಚಾಲೆಂಜ್ ಎನ್ನುವ ಹೊಸ ಚಾಲೆಂಜ್ ಸದ್ದು ಮಾಡುತ್ತಿದೆ. ಇದೀಗ ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ಈ ಬಾಟಲ್ ಕ್ಯಾಪ್ ಚಾಲೆಂಜ್ ಪ್ರಾರಂಭಿಸಿದ್ದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು, ನಟ ಅರ್ಜುನ್ ಸರ್ಜಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಈ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದರು. ಇದೀಗ ನಟಿ ರಚಿತಾ ರಾಮ್ ಕೂಡ ಬಾಟಲ್ ಕ್ಯಾಪ್ ಚಾಲೆಂಜ್‍ನಲ್ಲಿ ಗೆದ್ದಿದ್ದಾರೆ.
ನಟಿ ರಚಿತಾ ರಾಮ್ ಅವರು ಸದ್ಯಕ್ಕೆ ಜಿಮ್‍ನಲ್ಲಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಈ ಮಧ್ಯೆ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ಜಿಮ್‍ನಲ್ಲೇ ಒಂದು ಟೇಬಲ್ ಮೇಲೆ ಬಾಟಲ್ ಇಟ್ಟು ಸ್ವಲ್ಪ ದೂರ ಹೋಗಿ ಒಂದು ಸುತ್ತು ಸುತ್ತಿ ಬಳಿಕ ನಿಧಾನವಾಗಿ ಬಾಟಲ್‍ನ ಕ್ಯಾಪನ್ನು ಕಾಲಿನಿಂದ ಒದ್ದು ಬೀಳಿಸಿದ್ದಾರೆ.
ಈ ಬಾಟಲ್ ಚಾಲೆಂಜ್ ಮಾಡಿದ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಹ್ಯಾಶ್ ಟ್ಯಾಗ್ ಹಾಕಿ ಬಾಟಲ್ ಕ್ಯಾಪ್ ಚಾಲೆಂಜ್ (#bottlecapchallenge) ಎಂದು ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
Wanted to do a #bottlecapchallenge Yaaasssss I did it..!!!????✌???? pic.twitter.com/45mPHSDu4D
— Rachita Ram (@RachitaRamDQ) July 5, 2019
ಬಾಟಲ್ ಕ್ಯಾಪ್ ಚಾಲೆಂಜ್ ಏನು?
ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು. ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.