ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಭೇಟಿ ನೀಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಉಪಚುನಾವಣೆ ಪ್ರಚಾರ, ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಭಾನುವಾರ ಸಿನಿಮಾ ನೋಡುವ ಮೂಲಕ ರಿಲ್ಯಾಕ್ಸ್ ಆಗಿದ್ರು. ಹತ್ತು ದಿನಗಳಿಂದ ಮೈಸೂರಿನಲ್ಲೇ ಇರುವ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹೊರಡುವ ಮುನ್ನ ಭಾನುವಾರ ಮಧ್ಯಾಹ್ನ ಜಯಲಕ್ಷ್ಮಿಪುರದಲ್ಲಿರುವ ಡಿಆರ್‍ಸಿ ಮಲ್ಟಿಪ್ಲೆಕ್ಸ್‍ಗೆ ತೆರಳಿ `ಕೌಟುಂಬಿಕ ಪ್ರಧಾನ’ ಮತ್ತು ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿರುವ `ರಾಜಕುಮಾರ’ ಚಿತ್ರ ವೀಕ್ಷಿಸಿದ್ರು.
ಚಿತ್ರ ವೀಕ್ಷಿಸಿದ ಸಿಎಂ, ರಾಜಕುಮಾರ ಚಿತ್ರತಂಡಕ್ಕೆ ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಹೀಗಾಗಿ ಇಂದು ಪುನೀತ್ ರಾಜ್‍ಕುಮಾರ್ ಸಿಎಂ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಸಿಎಂ, ಚಿತ್ರ ಉತ್ತಮವಾಗಿ ಮೂಡಿಬಂದಿದೆ ಅಂತಾ ಪವರ್ ಸ್ಟಾರ್‍ಗೆ ಅಭಿನಂದನೆ ಸಲ್ಲಿಸಿದ್ರು. ಪುನೀತ್ ಅವರಿಗೆ ಚಿತ್ರದ ನಿರ್ದೇಶಕ ಸಂತೋಷ ಹಾಗೂ ನಿರ್ಮಾಪಕ ವಿಜಯ್ ಸಾಥ್ ನೀಡಿದ್ರು.
ಮುಖ್ಯಮಂತ್ರಿಗಳು ಮೊದಲಿನಿಂದಲೂ ವರನಟ ಡಾ.ರಾಜಕುಮಾರ್ ಅವರ ಅಭಿಮಾನಿಯಾಗಿದ್ದಾರೆ. ಅಲ್ಲದೇ ಸ್ವಂತ ಜಿಲ್ಲೆಯವರೆಂಬ ಅಭಿಮಾನವೂ ಇದೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದ ಪುನೀತ್, ತಮ್ಮ ಚಿತ್ರ ಬಿಡುಗಡೆ ಆಗುತ್ತಿರುವ ವಿಷಯ ತಿಳಿಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ಸಿನಿಮಾ ನೋಡಿದ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ಪುನೀತ್, ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಡಾ.ರಾಜ್ ಅವರನ್ನು ಭೇಟಿಯಾದಾಗ ಅವರು “ನಮ್ಮ ಕಾಡಿನವರು ಬಂದರು” ಎಂದು ಹೇಳುತ್ತಿದ್ದುದನ್ನು ಸಿದ್ದರಾಮಯ್ಯ ಇದೇ ವೇಳೆ ಸ್ಮರಿಸಿಕೊಂಡರು.