– ಬೆಳಗ್ಗೆ 11.30ಕ್ಕೆ ಊಟದ ವ್ಯವಸ್ಥೆ..!
ಬೆಂಗಳೂರು: ರಾಜರತ್ನ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ 12ನೇ ದಿನ. ನಿನ್ನೆ ಕುಟುಂಬಸ್ಥರಿಂದ 11ನೇ ದಿನದ ಕಾರ್ಯ ನಡೆದಿತ್ತು. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಇಂದು ಬೆಳಗ್ಗೆ ಬೆಳಗ್ಗೆ 11.30ಕ್ಕೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆ ಒಳಗೆ ಊಟ ರೆಡಿ ಇರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಸುಮಾರು 25-30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್‍ವೆಜ್ ವ್ಯವಸ್ಥೆ ಕೂಡ ಇದ್ದು, ಸುಮಾರು 5 ಸಾವಿರ ಜನರಿಗೆ ವೆಜ್, ಉಳಿದವರಿಗೆ ನಾನ್‍ವೆಜ್ ರೆಡಿ ಮಾಡಲಾಗಿದೆ. ಮುಂಜಾನೆ 4 ಗಂಟೆಗೆ ಚಿಕ್ಕಮಗಳೂರಿನಿಂದ ಬಂದ 2 ಟನ್ ಚಿಕನ್ ಬಂದಿದೆ. ಒಂದೂವರೆ ಸಾವಿರ ಜನರಿಂದ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. 700 ಬಾಣಸಿಗರು, ಸಹಾಯದವರು, ಕ್ಲೀನಿಂಗ್ ಕೆಲಸದವರು ಸೇರಿ 1,500 ಮಂದಿ ಸಿದ್ಧತೆ ನಡೆಸುತ್ತಿದ್ದಾರೆ. ಗ್ಯಾಸ್, ಸೌಧೆ ಬಳಿ ರಾತ್ರಿಯೆಲ್ಲಾ ಸಿದ್ಧತೆಯಲ್ಲಿ ತಲ್ಲೀಣರಾಗಿದ್ದಾರೆ.
2 ವಿಭಾಗಗಳಲ್ಲಿ ಊಟದ ವ್ಯವಸ್ಥೆ:
ಅಪ್ಪು ಅಭಿಮಾನಿಗಳಿಗೆ 2 ವಿಭಾಗಗಳಲ್ಲಿ ಊಟ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ನಾನ್ ವೆಜ್, 5 ಸಾವಿರ ಜನಕ್ಕೆ ವೆಜ್ ಊಟ ಇದೆ. ಬೆಳಗ್ಗೆ 11.30ರ ನಂತರ ಅನ್ನ ಸಂತರ್ಪಣೆ ಪ್ರಾರಂಭವಾಗಲಿದೆ.
ಅನ್ನ ಸಂತರ್ಪಣೆಯಲ್ಲಿ ಏನೆಲ್ಲಾ ಇರಲಿದೆ?
ವೆಜ್ ಮೆನು
* ಮಸಾಲ ವಡೆ
* ಘೀ ರೈಸ್-ಕುರ್ಮಾ
* ಆಲೂ ಕಬಾಬ್
* ಅಕ್ಕಿ ಪಾಯಸ
* ಅನ್ನ- ತರಕಾರಿ ಸಾಂಬಾರ್
* ರಸಂ
* ಮಜ್ಜಿಗೆ
ನಾನ್ ವೆಜ್ ಮೆನು
* ಘೀ ರೈಸ್
* ಚಿಕನ್ ಚಾಪ್ಸ್/ ಚಿಕನ್ ಸಾರ್
* ಕಬಾಬ್
* ಅನ್ನ-ಸಾಂಬಾರ್
* ರಸಂ
ಪೊಲೀಸ್ ಕಟ್ಟೆಚ್ಚರ:
ಅನ್ನ ಸಂತರ್ಪಣೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗುತ್ತಿದೆ. ಎಲ್ಲೂ ಅಹಿತಕರ ಘಟನೆ ಆಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಪ್ಯಾಲೆಸ್ ಗ್ರೌಂಡ್ ಸುತ್ತ ಓರ್ವ ಡಿಸಿಪಿ, 3 ಎಸಿಪಿ, 32 ಇನ್ಸ್ ಪೆಕ್ಟರ್, 70 ಸಬ್ ಇನ್ಸ್‍ಪೆಕ್ಟರ್ ಸೇರಿ ಒಟ್ಟು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.