Bengaluru CityCinemaKarnatakaLatestLeading NewsMain Post

ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರುನಾಡಿನ ರಾಜರತ್ನ ಅಪ್ಪು ಇಂದಿನಿಂದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಆಗಲಿದ್ದಾರೆ. ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನ ಮರಣೋತ್ತರವಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಪ್ರದಾನ ಮಾಡಲಾಗುತ್ತದೆ. ವಿಧಾನಸೌಧದ ಮೆಟ್ಟಿಲುಗಳ ಕಾರ್ಯಕ್ರಮ ನಡೆಯಲಿದ್ದು, ಪುನೀತ್ ಪತ್ನಿ ಅಶ್ವಿನಿ ಅವರು ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ.

ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದೆ. ಸುಮಾರು 25 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು, ಗಣ್ಯರಿಗೆ 5 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ. ಇನ್ನು ಡಾ.ರಾಜ್ ಕುಟುಂಬಕ್ಕೂ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ನಿನ್ನೆ ಅಪ್ಪು ನಿವಾಸಕ್ಕೆ ಭೇಟಿ ನೀಡಿದ ಸಚಿವ ಅಶೋಕ್, ಸುನೀಲ್ ಕುಮಾರ್ ಇಂದಿನ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರನ್ನು ಆಹ್ವಾನಿಸಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬ ಸದಸ್ಯರು ಬಸ್‌ನಲ್ಲಿ ಒಟ್ಟಿಗೆ ವಿಧಾನಸೌಧಕ್ಕೆ ಬಂದಿಳಿಯಲಿದ್ದಾರೆ. ಇಡೀ ಕುಟುಂಬ ಒಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಡಾ.ರಾಜ್ ಕುಟುಂಬ ಸದಸ್ಯರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಕರುನಾಡಿನ `ರಾಜರತ್ನ’ ಅಪ್ಪುಗೆ `ಕರ್ನಾಟಕ ರತ್ನ’ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂಭ್ರಮ ತಂದಿದೆ. ಆದ್ರೆ ಅಪ್ಪು ಇಲ್ಲವಲ್ಲ ಅನ್ನೋ ನೋವು ಇನ್ನಿಲ್ಲದಂತೆ ಕಾಡಿದೆ. ಇದನ್ನೂ ಓದಿ: ಅಪ್ಪುಗೆ ನಾಳೆ ‘ಕರ್ನಾಟಕ ರತ್ನ’ ಪ್ರದಾನ: ಕಾರ್ಯಕ್ರಮದ ಫುಲ್ ಡಿಟೇಲ್ಸ್

ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಖ್ಯ ಅತಿಥಿಯಾಗಿ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂ.ಎನ್‌ಟಿಆರ್, ಇನ್ಫೋಸಿಸ್ ಸುಧಾಮೂರ್ತಿ ಭಾಗಿಯಾಗುತ್ತಿರುವುದು ಸಂಭ್ರಮವನ್ನ ಇಮ್ಮಡಿಗೊಳಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಈ ಸಮಾರಂಭಕ್ಕೆ ರಜನಿಕಾಂತ್ ಹಾಗೂ ಜೂ.ಎನ್‌ಟಿಆರ್ ಆಗಮಿಸಲಿದ್ದಾರೆ. ಇದೇ ರಜನಿಕಾಂತ್ ದಶಕಗಳ ಹಿಂದೆ ಪುನೀತ್ ಅಭಿನಯದ 2002ರಲ್ಲಿ ತೆರೆ ಕಂಡ ಅಪ್ಪು ಚಿತ್ರದ ನೂರನೇ ದಿನ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಈಗ ಇವತ್ತಿನ ಕ್ಷಣಕ್ಕೂ ಸಾಕ್ಷಿಯಾಗಲಿದ್ದಾರೆ. ಅಪ್ಪುಗೆ ಚಕ್ರವ್ಯೂಹ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹಾಡೊಂದನ್ನ ಹಾಡಿದ್ರು. ಅಪ್ಪು ನಿಧನ ಬಳಿಕ ಅಪ್ಪುವನ್ನ ನೆನೆದು ಗದ್ಗದಿತರಾಗಿದ್ರು. ಇದೀಗ ಗೆಳೆಯನಿಗೆ ಪ್ರಶಸ್ತಿ ಕೊಡಲು ಮುಖ್ಯ ಅತಿಥಿಯಾಗಿ ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ.

ವಿಧಾನಸೌಧದ ಪೂರ್ವದ್ವಾರದ ಗ್ರ್ಯಾಂಡ್ ಸ್ಟೆಪ್ ಮೇಲೆ ಹಂಪಿ ಮಾದರಿಯ ಬೃಹತ್ ಮಂಟಪ ನಿರ್ಮಾಣ ಮಾಡಲಾಗಿದೆ. ಅದ್ದೂರಿ ವೇದಿಕೆ ಸಿದ್ಧಗೊಂಡಿದೆ. ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನಟ ರಜನಿಕಾಂತ್, ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ. ವೇದಿಕೆ ಮೇಲೆ 30 ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಗ್ರ್ಯಾಂಡ್ ಸ್ಟೆಪ್ ವೇದಿಕೆಯ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 7000 ವಿಐಪಿ ಪಾಸ್‌ಗಳ ವಿತರಣೆ ಮಾಡಲಾಗಿದ್ದು, ಆಸನಗಳನ್ನ ಹಾಕಲಾಗಿದೆ. ಇನ್ನು ಅಪ್ಪು ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಇಲಾಖೆ ಕಾರ್ಯಕ್ರಮದ ಬಂದೋಬಸ್ತ್‌ಗೆ 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದೆ. ಇವತ್ತಿನ ಕಾರ್ಯಕ್ರಮಕ್ಕೆ ಸಂಚಾರಿ ಪೊಲೀಸರು ಕೂಡ ಸರ್ವ ಸನ್ನದ್ಧರಾಗಿದ್ದು, ಅಂಬೇಡ್ಕರ್ ರೋಡ್ ಸೇರಿದಂತೆ ಹಲವು ರಸ್ತೆ ಮಾರ್ಗಗಳನ್ನ ಬದಲಿಸಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಸಿನಿಮಾ ಹಾಸ್ಯಾಸ್ಪದ ಮತ್ತು ಕಳಪೆಯಾಗಿದೆ : ನಿರ್ದೇಶಕ ಅಭಿರೂಪ್ ಬಸು

7,000 ವಿಐಪಿಗಳಿಗೆ ಪಾಸ್ ವಿತರಣೆ
ಚಿತ್ರರಂಗದ ಗಣ್ಯರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 7,000 ವಿಐಪಿಗಳಿಗೆ ಪಾಸ್ ವಿತರಣೆ ಮಾಡಲಾಗಿದೆ. ಪಾಸ್ ಇದ್ದರಷ್ಟೆ ವಿಧಾನಸೌಧದ ಒಳಗೆ ಪ್ರವೇಶವಿರುತ್ತದೆ. 20 ರಿಂದ 30 ಸಾವಿರ ಸಾರ್ವಜನಿಕರು ಭಾಗಿಯಾಗುವ ನಿರೀಕ್ಷೆ ಇದೆ. ವೀಕ್ಷಣೆಗಾಗಿ 10 ಕಡೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಮೂವರು ಡಿಸಿಪಿ, 10 ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ವಿವಿಐಪಿ, ವಿಐಪಿ, ಸಾರ್ವಜನಿಕರಿಗೆ ಮಾರ್ಗ ಪ್ರತ್ಯೇಕವಾಗಿದೆ. ವಿವಿಐಪಿ ವಾಹನಗಳಿಗಷ್ಟೆ ವಿಧಾನಸೌಧದ ಒಳಗೆ ಪ್ರವೇಶ ಇರುತ್ತದೆ.

ಯಾವೆಲ್ಲ ಮಾರ್ಗ ಬಂದ್?
ವಿಧಾನಸೌಧದ ಪೂರ್ವ ಹಾಗೂ ಅಂಬೇಡ್ಕರ್ ರಸ್ತೆ, ತಿಮ್ಮಯ್ಯ ಕಾರ್ನರ್‌ನಿಂದ ಕೆ.ಆರ್ ಸರ್ಕಲ್‌ವರೆಗೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮಾರ್ಗ ಬದಲಾವಣೆ, ಅಂಬೇಡ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಅಲಿ ಅಸ್ಕರ್ ರಸ್ತೆ, ಅರಮನೆ ರಸ್ತೆ, ರಾಜಭವನ ರಸ್ತೆ, ಕಬ್ಬನ್ ಪಾರ್ಕ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಕನ್ನಿಂಗ್ ಹಾಮ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿಷೇಧ ಇರಲಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಕಬ್ಬನ್ ಪಾರ್ಕ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿದೆ.

ಕರ್ನಾಟಕ ರತ್ನ ಪ್ರಶಸ್ತಿಯನ್ನು 1992ರಿಂದ ಈವರೆಗೂ 9 ಮಂದಿ ಗಣ್ಯರಿಗಷ್ಟೇ ನೀಡಲಾಗಿದೆ. ರಾಷ್ಟ್ರಕವಿ ಕುವೆಂಪು, ಡಾ.ರಾಜ್‌ಕುಮಾರ್, ಎಸ್.ನಿಜಲಿಂಗಪ್ಪ, ಪ್ರೊ.ಸಿಎನ್‌ಆರ್ ರಾವ್, ಡಾ.ದೇವಿಶೆಟ್ಟಿ, ಪಂಡಿತ್ ಭೀಮಸೇನ್ ಜೋಷಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಾಲಿನಲ್ಲಿ ಇಂದಿನಿಂದ ಪುನೀತ್‌ರಾಜಕುಮಾರ್ ರಾರಾಜಿಸಲಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button