ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನವ ಸುದ್ದಿ, ಸ್ಯಾಂಡಲ್‍ವುಡ್ ಮಂದಿ, ಅಭಿಮಾನಿಗಳಿಗೆ ಅಘಾತವನ್ನುಂಟು ಮಾಡಿದೆ. ಮೂರು ದಿನಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ಕಳೆದ ಮಂಗಳವಾರ ಆಕ್ಟೋಬರ್ 26 ರಂದು ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಪತ್ನಿ ಆಶ್ವಿನಿ ಯವರ ಜೊತೆಗೆ ದೇವಾಲಯಕ್ಕೆ ಆಗಮಿಸಿದ್ದ ಪುನೀತ್ ರಾಜ್ ಕುಮಾರ್ ಒಂದು ಗಂಟೆಗೂ ಅಧಿಕ ಕಾಲ ದೇವಾಲಯದಲ್ಲೇ ಇದ್ದರು. ದೇವಾಲಯದ ಅಧಿಕಾರಿ ಸಿಬ್ಬಂದಿ ಜೊತೆ ಕಚೇರಿಯಲ್ಲಿ ಕೂತು ಕಾಲ ಕಳೆದಿದ್ದರು.
ಅರ್ಚಕರ ಮನೆಗೆ ಹೋಗಿ ಬಂದಿದ್ದರು. ಎಲ್ಲರ ಜೊತೆ ಸರಳತೆಯಿಂದ ಮಾತನಾಡಿ ಮೆಚ್ಚುಗೆಗೆ ಪಾತ್ರವಾಗಿದ್ದ ಪುನೀತ್ ಅವರ ಎದುರು ದೇವಾಲಯದ ಸೂಪರಿಡೆಂಟ್ ರಘು ಅವರ ಮಗ ಯುವರತ್ನ ಸಿನಿಮಾದ ಡೈಲಾಗ್ ಹೇಳಿದ್ದು ಕೇಳಿ ನಟ ಪುನೀತ್ ಮುಗಳ್ನಕ್ಕು ಖುಷಿಪಟ್ಟಿದ್ದರು.
ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ಯಾರಿಂದಲೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅಯ್ಯೋ ದೇವರೆ ಯಾಕೆ ಹೀಗೆ ಮಾಡಿ ಬಿಟ್ಟೆ ಸುಬ್ರಹ್ಮಣ್ಯ ಸ್ವಾಮಿ ಆಶೀರ್ವಾದ ಪುನೀತ್ ರಾಜ್ ಕುಮಾರ್‍ಗೆ ಸಿಗಲಿಲ್ವೇ? ಅಂತ ನೊಂದುಕೊಳ್ಳುತ್ತಿದ್ದಾರೆ. ದೇವಾಲಯದ ಮುಂಭಾಗ ಬಾಲನಾಗಮ್ಮ ವಿಗ್ರಹದ ಬಳಿಯೇ ಡಾ ರಾಜ್ ಕುಮಾರ್ ರವರು ನಾಗರಕಲ್ಲುಗಳ ಪ್ರತಿಷ್ಠಾಪಿಸಿದ್ದು, ಆ ನಾಗರಕಲ್ಲುಗಳಿಗೆ ಸಹ ಪುನೀತ್ ರಾಜ್ ಕುಮಾರ್ ಪೂಜೆ ಮಾಡಿಸಿದ್ದರು. ಮನೆಕೆಲಸದವ ವೆಂಕಟೇಶ್ ಪೂಜೆ ಪುನಸ್ಕಾರ ನೇರವೇರಿಸಿದ್ದಾರೆ.