ಪ್ರಮೋದ್ ಶೆಟ್ಟಿ ಪಾಲಿಗೆ ಆಕಸ್ಮಿಕವೇ ಆರಂಭ!

Public TV
3 Min Read
pramod shetty F

– ರಂಗಭೂಮಿಯಿಂದಾಗಿ ಶುರುವಾಯ್ತು ಸಿನಿಮಾ ಯಾನ!

ಶ್ರೀಮನ್ನಾರಾಯಣ ಚಿತ್ರದಲ್ಲಿನ ವಿಶಿಷ್ಟವಾದೊಂದು ವಿಲನ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸರ್‍ಪ್ರೈಸ್ ಕೊಡೋ ಖುಷಿಯಲ್ಲಿರುವವರು ಪ್ರಮೋದ್ ಶೆಟ್ಟಿ. ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳಲ್ಲಿ ಮನಸಲ್ಲುಳಿಯುವಂಥಾ ನಟನೆ ನೀಡಿದ್ದ ಪ್ರಮೋದ್ ಅಪ್ಪಟ ರಂಗಭೂಮಿ ಪ್ರತಿಭೆ. ನಾಟಕಗಳೇ ತನ್ನ ಜಗತ್ತೆಂಬಂತೆ ಫಿಕ್ಸಾಗಿದ್ದ ಅವರು ನಟನೆಯನ್ನು ಆರಿಸಿಕೊಂಡಿದ್ದೇ ಒಂದು ಆಕಸ್ಮಿಕ. ಅಲ್ಲಿ ಬಣ್ಣ ಹಚ್ಚಿ ನಟನಾಗಿ ರೂಪುಗೊಂಡ ಪ್ರಮೋದ್ ಸಿನಿಮಾ ರಂಗದಲ್ಲಿಯೂ ಖ್ಯಾತ ನಟ ಅನ್ನಿಸಿಕೊಂಡಿದ್ದು ಮತ್ತೊಂದು ಆಕಸ್ಮಿಕ!

ಪ್ರಮೋದ್ ಶೆಟ್ಟಿಯವರ ಒಟ್ಟಾರೆ ಸ್ಟೋರಿಯನ್ನು ಮುಂದಿಟ್ಟುಕೊಂಡು ಹೇಳೋದಾದರೆ ಆಕಸ್ಮಿಕಗಳೇ ಅವರ ಪಾಲಿನ ಅದ್ಭುತ ಆರಂಭ!

ತಂದೆ ಹೋಟೆಲ್ ಉದ್ಯಮಿ. ಬುದ್ಧಿ ಬಲಿತಾಗಿಂದಲೂ ಯಾವುದಕ್ಕೂ ತತ್ವಾರವಿಲ್ಲದ ಸ್ಥಿತಿವಂತ ಕುಟುಂಬ. ತಂದೆಯ ಬ್ಯುಸಿನೆಸ್ಸಿನ ಕಾರಣದಿಂದ ಬದುಕು ಬೆಂಗಳೂರಿನಲ್ಲಿದ್ದರೂ ತಾಯಿ ದೇವಕಿಯವರ ಕಾರಣದಿಂದ ಕುಂದಾಪುರದ ಕಿರಾಡಿಯ ಮೇಲೆ ಕರುಳಬಳ್ಳಿಯ ಸೆಳೆತ. ಕಾಲೇಜು ತಲುಪಿಕೊಂಡಾದ ಮೇಲೂ ಕೂಡಾ ಪ್ರಮೋದ್ ಅವರದ್ದು ಹೇಳಿಕೊಳ್ಳುವಂಥಾ ಕನಸು, ಉದ್ದೇಶಗಳಿರದ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಬದುಕೋ ಮನಸ್ಥಿತಿ. ಒಳಗೊಳಗೇ ಮಗ ತನ್ನ ವಹಿವಾಟುಗಳ ವಾರಸುದಾರನಾಗುತ್ತಾನೆಂಬ ತಂದೆಯ ಒಳ ಆಸೆ. ಇದೆಲ್ಲವನ್ನೂ ಮೀರಿದ ಸಿಲ್ಲಿ ಆಕಸ್ಮಿಕವೊಂದು ಘಟಿಸಿದ್ದು ಪ್ರಮೋದ್ ಪಿಯುಸಿಯಲ್ಲಿದ್ದಾಗ!

https://www.instagram.com/p/Bl2yZdbA_BH/?taken-by=pramodshettyk

ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರಲ್ಲಾ ಸುಜಯ್. ಅವರು ಪ್ರಮೋದ್ ಅವರ ಕುಚಿಕು ಗೆಳೆಯ. ಇಬ್ಬರೂ ಒಗ್ಗಟ್ಟಾಗಿ ವರ್ಷ ಪೂರ್ತಿ ಬಂಕ್ ಹೊಡೆದು ಅಲೆದ ಪರಿಣಾಮವಾಗಿ ಹಾಲ್ ಟಿಕೆಟಿಗೇ ಕಂಟಕ ಎದುರಾಗಿತ್ತು. ಅಂಥಾ ಸಂದರ್ಭದಲ್ಲಿಯೇ ಕಾಲೇಜಿನ ನಾಟಕ ತಂಡದ ಕಡೆಯಿಂದ ಆಸಕ್ತಿ ಇರುವವರಿಗಾಗೊಂದು ಮೆಮೋ ಬಂದಿದ್ದೇ ಸುಜಯ್ ಹಿಂದೆ ಮುಂದೆ ನೋಡದೆ ನಾಟಕ ಟೀಮಿಗೆ ಹೊರಟು ನಿಂತಿದ್ದರು. ಅವರು ಒತ್ತಾಯದಿಂದಲೇ ಪ್ರಮೋದ್ ರನ್ನೂ ಕರೆದೊಯ್ದಿದ್ದರು. ನಾಟಕ ಟೀಮಿಗೆ ಸೇರಿದರೆ ಅಟೆಂಡೆನ್ಸ್ ಕೊಡುತ್ತಾರೆಂಬುದೊಂದೇ ಸುಜಯ್ ಗಿದ್ದ ದುರಾಸೆ!

ಹಾಗೆ ಅಚಾನಕ್ಕಾಗಿ ನಾಟಕ ತಂಡಕ್ಕೆ ಸೇರಿಕೊಂಡು ಬೆರಗಿನಿಂದಲೇ ಅದರ ತೆಕ್ಕೆಗೆ ಬಿದ್ದಿದ್ದ ಪ್ರಮೋದ್ ಡಿಗ್ರಿಗೆ ಬರುವ ಹೊತ್ತಿಗೆಲ್ಲಾ ನಟನಾಗಿ ರೂಪುಗೊಂಡಿದ್ದರು. ಅಲ್ಲೇ ಅವರಿಗೆ ಕೃಷ್ಣಮೂರ್ತಿ ಕವತ್ತಾರ್ ಗುರುವಾಗಿ ಸಿಕ್ಕಿದರು. ಅಲ್ಲಿಂದಾಚೆಗೆ ಕಾಲೇಜು ಬಿಟ್ಟ ಮೇಲೆಯೂ ನಾನಾ ನಾಟಕ ತಂಡಗಳಲ್ಲಿ ಅಭಿನಯಿಸಿದ್ದ ಪ್ರಮೋದ್‍ಗೆ ಲೋಕಿ, ಸೃಜನ್ ಲೋಕೇಶ್, ಮುನಿ ಮುಂತಾದ ಅನೇಕ ಸಿನಿಮಾ ನಟರು ಸಹಪಾಠಿಗಳಾದರು. ಆದರೂ ಕೂಡಾ ಅವರೆಂದೂ ಸಿನಿಮಾದಲ್ಲಿ ನಟಿಸೋ ಆಲೋಚನೆ ಮಾಡಿರಲೇ ಇಲ್ಲ. ಆದರೂ ಗುರುಗಳ ಒತ್ತಾಸೆಯ ಮೇರೆಗೆ ನರಸಿಂಹರಾಜು ಅವರ ಮೊಮ್ಮಗ ಅರವಿಂದ್ ನಿರ್ದೇಶನದ ಜುಗಾರಿ ಚಿತ್ರದಲ್ಲಿ ನಟಿಸಿದ್ದ ಪ್ರಮೋದ್ ಗೆ ಸಿನಿಮಾ ಶೂಟಿಂಗ್ ಎಂಬುದೇ ಬೋರಿಂಗ್ ಅನ್ನಿಸಿತ್ತಂತೆ. ಆದ್ದರಿಂದಲೇ ಅವರು ಮತ್ತೆ ನಾಟಕದ ಲೋಕದಲ್ಲಿ ಲೀನವಾಗಿದ್ದರು.

Pramod shetty 2

ಇಂಥಾ ಪ್ರಮೋದ್ ಶೆಟ್ಟಿಯವರನ್ನು ಸಿನಿಮಾ ನಟನಾಗಿ ರೂಪುಗೊಳ್ಳುವಂತೆ ಮಾಡಿದ್ದ ಕಾಲೇಜು ಗೆಳೆಯ, ಈಗಿನ ನಿರ್ದೇಶಕ ರಿಷಬ್ ಶೆಟ್ಟಿ. ಅವರು ರಕ್ಷಿತ್ ಗೆ ಪರಿಚಯಿಸಿ ಪ್ರಮೋದ್ ಗೆ ಮನಸಿಲ್ಲದಿದ್ದರೂ ಉಳಿದವರು ಕಂಡಂತೆ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುವಂತೆ ಮಾಡಿದ್ದರು. ಅಲ್ಲಿಂದೀಚೆಗೆ ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳ ಮೂಲಕ ಬೇಡಿಕೆ ಗಳಿಸಿಕೊಂಡಿರೋ ಪ್ರಮೋದ್ ಶ್ರೀಮನ್ನಾರಾಯಣ ಚಿತ್ರದಲ್ಲಿ ಅತಿರಥ ಮಹಾರಥ ಖಳ ನಟರನ್ನು ಮನಸಲ್ಲಿಟ್ಟುಕೊಂಡು ರೂಪಿಸಿದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ರಂಗಭೂಮಿಯಲ್ಲಿದ್ದಾಗಲೇ ಸುಪ್ರಿಯಾ ಶೆಟ್ಟಿಯವರ ಜೊತೆ ಲವ್ವಲ್ಲಿ ಬಿದ್ದಿದ್ದ ಪ್ರಮೋದ್ ವರ್ಷಾಂತರಗಳ ಕಾಲ ಅದನ್ನು ಕಾಯ್ದುಕೊಂಡು ಅವರನ್ನೇ ಮದುವೆಯೂ ಆಗಿದ್ದಾರೆ. ಮುದ್ದಾದೊಂದು ಹೆಣ್ಣು ಮಗುವೂ ಇದೆ. ಇವರ ಮಡದಿ ಸುಪ್ರಿಯಾ ಇದೀಗ ಕುಲವಧು ಸೀರಿಯಲ್ಲಿನ ಕಾಂಚನಾ ಪಾತ್ರದಿಂದಲೇ ಕಿರುತೆರೆಯಲ್ಲಿಯೂ ಅಲೆ ಸೃಷ್ಟಿಸಿದ್ದಾರೆ.

Pramod shetty

ತಂದೆ ರಾಜು ಶೆಟ್ಟರಿಗೆ ಮಗ ನಟನಾಗಿ ಬಣ್ಣ ಹಚ್ಚೋದು ಅದೇಕೋ ಇಷ್ಟವಿರಲಿಲ್ಲ. ಆದರೆ ಹಂತ ಹಂತವಾಗಿ ನಟನಾಗಿ ಬೆಳೆಯುತ್ತಿರೋ ಮಗನ ಬಗ್ಗೆ ಒಳಗೊಳಗೇ ಹೆಮ್ಮೆ ಹೊಂದಿದ್ದ ಅವರು ಅದೆಷ್ಟೋ ನಾಟಕಗಳನ್ನು ಕದ್ದು ನೋಡಿದ್ದರಂತೆ. ಆದರೂ ಮಗ ಎಲ್ಲಿ ಖಾಲಿ ಜೋಳಿಗೆ ಇಳಿಬಿಟ್ಟುಕೊಂಡು ಓಡಾಡ ಬೇಕಾಗುತ್ತದೋ ಎಂಬ ಭಯದಿಂದಿದ್ದ ಪ್ರಮೋದ್ ಅವರ ತಂದೆಗೀಗ ಭರ್ಜರಿ ಖುಷಿ. ಯಾಕೆಂದರೆ ಪ್ರಮೋದ್ ಈಗ ಪ್ರಸಿದ್ಧ ನಟರಾಗಿ ರೂಪುಗೊಂಡಿದ್ದಾರೆ. ಆಕಸ್ಮಿಕವಾಗಿ ಎಂಟ್ರಿ ಕೊಟ್ಟಿದ್ದ ರಂಗಭೂಮಿಯ ಅನುಭವಗಳನ್ನೇ ಶಕ್ತಿಯಾಗಿಸಿಕೊಂಡಿರುವ ಪ್ರಮೋದ್ ನಟನೆಯ ಕಸುವಿನಿಂದಲೇ ಗಮನ ಸೆಳೆದಿದ್ದಾರೆ.

ಸದ್ಯ ಪ್ರಮೋದ್ ನಟಿಸಿರುವ, ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

kavacha a

https://www.instagram.com/p/BkpmyRqgUTx/?taken-by=pramodshettyk

Share This Article
Leave a Comment

Leave a Reply

Your email address will not be published. Required fields are marked *