ಮೈಸೂರು: ಯಾವುದೇ ಬಾಡಿಗಾರ್ಡ್ ಇಲ್ಲದೆ ಇಷ್ಟು ದಿನ ರಾಜ್ಯ ಸುತ್ತುತ್ತಿದ್ದ ನಟ ಪ್ರಕಾಶ್ ರೈ ಈಗ ದಿಢೀರನೆ ಇಬ್ಬರು ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಗೆ ಬಾಡಿಗಾರ್ಡ್ ಜೊತೆಯಲ್ಲೇ ರೈ ಆಗಮಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈ, ನನಗೆ ಯಾವಾಗ ಏನಾಗೋತ್ತೋ ಅನ್ನೋ ಆತಂಕ ಇದ್ದೇ ಇದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಬಾಡಿಗಾರ್ಡ್ ಜೊತೆಗಿಟ್ಟುಕೊಂಡಿದ್ದೇನೆ. ನನಗೆ ಭಯ ಇಲ್ಲ ಆದ್ರೆ ಜೀವದ ಬೆಲೆ ಗೊತ್ತಿದೆ. ಅದಕ್ಕೆ ಬಾಡಿಗಾರ್ಡ್ ಇಟ್ಟುಕೊಂಡಿದ್ದೇನೆ. ನನ್ನ ಕುಟುಂಬದ ರಕ್ಷಣೆಯನ್ನು ನೋಡಿಕೊಳ್ಳಬೇಕಿದೆ ಎಂದರು.
Advertisement
Advertisement
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಿಜೆಪಿಯವರು ನಿಮ್ಮನ್ನ ಬದುಕೋಕೆ ಬಿಡ್ತಾರಾ ಅಂತ ಪ್ರಶ್ನೆ ಕೇಳಿದ್ರು. ಆದ್ರೆ ನನಗೆ ಭಯ ಇರೋದು ನನ್ನಂತವರು ಇರಲೇಬಾರದಾ ಅಂತ. ಅದಕ್ಕೆ ನಾನು ಕೋಮುವಾದದ ವಿರುದ್ಧ ಪ್ರಶ್ನೆ ಮಾಡುತ್ತಿದ್ದೇನೆ. ನನ್ನ ಹೋರಾಟಕ್ಕೆ ಸ್ಪಷ್ಟತೆ ಇದೆ. ನಾನು ಸಂಪೂರ್ಣ ಬಿಜೆಪಿ ವಿರೋಧಿ. ನನ್ನ ಹೋರಾಟದ ಹಾದಿಯಲ್ಲಿ ಬಿಜೆಪಿ ತಪ್ಪುಗಳೇ ಎದ್ದು ಕಾಣ್ತಿವೆ. ಅದಕ್ಕಾಗಿ ಅವರ ವಿರುದ್ಧ ಹೋರಾಟ ಮಾಡ್ತಿನಿ. ನನಗೆ ವಾಜಪೇಯಿ ಇದ್ದ ಬಿಜೆಪಿ ಬೇಕು. ನಾನು ವಿರೋಧಿಸುವ ಜನರನ್ನ ಬಿಜೆಪಿಯಿಂದ ತೆಗೆದು ಹಾಕಿದ್ರೆ ಅವರಿಗೆ ಬೆಂಬಲ ಕೊಡ್ತಿನಿ ಎಂದು ತಮ್ಮ ಜಸ್ಟ್ ಆಸ್ಕಿಂಗ್ ಅಭಿಯಾನದ ಬಗ್ಗೆ ಸಮರ್ಥನೆ ನೀಡಿದರು.
Advertisement
Advertisement
ಮೈಸೂರು ಸಂಸದ ಪ್ರತಾಪ್‍ಸಿಂಹ ಅವರ ನಟ ರೈ ಕಾಗೆ ಎಂಬ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್‍ಸಿಂಹ ಹೇಳಿಕೆ ಚೆನ್ನಾಗಿದೆ. ನಾನು ಸಿಂಹ ಯಾವಾಗಾ ಬೇಕು ಅವಾಗ ಘರ್ಜಿಸುತ್ತೇನೆ ಎಂದಿದ್ದು ಉತ್ತಮ. ಆದ್ರೆ ಅವರ ತಿರುಗೇಟಿನಲ್ಲಿ ಆರೋಗ್ಯಕರ ಚರ್ಚೆ ಬದಲು ಡರ್ಟಿನೆಸ್ ಇದೆ. ಅದು ನನಗೆ ಇಷ್ಟ ಆಗೋಲ್ಲ. ಅವರ ಪದಬಳಕೆಯಲ್ಲೆ ಅವರ ಬ್ರೈನ್‍ನಲ್ಲಿ ಏನಿದೆ ಅಂತಾ ಗೊತ್ತಾಗುತ್ತೆ ಎಂದು ಟಾಂಗ್ ಕೊಟ್ಟರು.
ಕಾವೇರಿ ನದಿ ನೀರು ವಿಚಾರದಲ್ಲಿ ನಟರಾದ ರಜನೀಕಾಂತ್, ಕಮಲ್ ಹಾಸನ್ ನೀಡಿರೋ ಹೇಳಿಕೆಗೆ ಗರಂ ಆಗಿಯೇ ಪ್ರತಿಕ್ರಿಯಿಸಿದ ರೈ, ರಜನಿಕಾಂತ್, ಕಮಲಹಾಸನ್ ದೊಡ್ಡ ನಟರಾದ ತಕ್ಷಣ ಬಾಯಿಗೆ ಬಂದ ಹಾಗೇ ಮಾತನಾಡಬಹುದೇ. ಅವರ ಮಾತನ್ನ ನಾನು ಯಾಕೇ ಕೇಳಬೇಕು? ಎಂದು ರಜನಿಕಾಂತ್ ಹಾಗೂ ಕಮಲಹಾಸನ್ ವಿರುದ್ಧ ಹರಿಹಾಯ್ದರು.
ಕಾವೇರಿ ನದಿ ನೀರು ವಿಚಾರ ಟಿ20 ಮ್ಯಾಚ್ ಅಲ್ಲ. ಅವರು ಹೇಳಿಕೆ ನೀಡಿದ್ರು ಅಂತ ನಾ ಮಾತಾಡೋಕೆ ಆಗೋಲ್ಲ. ಅವರು ಹಾಗೇ ಹೇಳಿದ್ರೆ ನಾನು ಹೀಗೆ ಹೇಳ್ತಿನಿ ಅಷ್ಟೇ. ಅವರದ್ದೆ ಭಾಷೆಯಲ್ಲಿ ನಾನು ಉತ್ತರ ಕೊಡಬೇಕು ಅಂತ ಏನೂ ಇಲ್ಲ. ಮೊದಲು ನದಿ ಏನು ಹೇಳುತ್ತೆ ಕೇಳೋಣ. ಆಮೇಲೆ ನಾವು ಮಾತನಾಡೋಣ. ಅದು ಬಿಟ್ಟು ರಜನಿಕಾಂತ್ ಹೇಳಿಕೆಗೆ ಮರು ಹೇಳಿಕೆ ಕೊಟ್ಟು ನಾನು ಜಗಳ ಆಡೋಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ವ್ಯಕ್ತಿಗತವಾಗಿ ನನಗೆ ಇಷ್ಟ. ಆದರೆ, ಅವರ ಪರವಾಗಿ ನಾನು ಪ್ರಚಾರಕ್ಕೆ ಹೋಗಲ್ಲ. ಅವರೇ ಎಲ್ಲಾ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟದಲ್ಲಿ ಕೋಮುವಾದಿಗಳ ರಾಜಕೀಯ ಬೇಡ. ಕೋಮುವಾದ ಬೇಡ ಎನ್ನುವ ರಾಜಕಾರಣಿಗಳನ್ನ ನೀವು ಆರಿಸಿಕೊಳ್ಳಿ. ನಾನೊಬ್ಬ ಮತದಾರನಾಗಿ ಬಂದಿದ್ದೇನೆ. ಜನರು ಹೇಳೊದನ್ನ ದೊಡ್ಡ ವೇದಿಕೆ ಸಿಗದೆ ನಿಮ್ಮ ಮುಂದೆ ಹೇಳಲು ಬಂದಿದ್ದೇನೆ. ಇತ್ತೀಚೆಗೆ ರಾಜ್ಯಪಾಲರೊಬ್ಬರು ಮಹಿಳೆಯೊಬ್ಬರನ್ನ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ಆಕೆ ನನ್ನ ಅನುಮತಿ ಇಲ್ಲದೆ ಹೇಗೆ ಮುಟ್ಟಿದ್ರಿ ಅನ್ನೋ ಪ್ರಶ್ನೆ ಮಾಡ್ತಾರೆ. ಇನ್ನೊಬ್ಬ ರಾಜಕಾರಣಿ ಹೆಣ್ಣುಮಕ್ಕಳು ದೊಡ್ಡ ಪತ್ರಕರ್ತರಾಗೋದು ದೊಡ್ಡವರ ಜೊತೆ ಮಲಗೋಕೆ ಅಂತಾರೇ. ಇವರೆಲ್ಲರನ್ನ ಕನಿಷ್ಠ ಪ್ರಶ್ನೆ ಮಾಡುವ ನೈತಿಕತೆ ನಿಮ್ಮ ಪಕ್ಷಗಳಿಗಿಲ್ಲ. ಇಂತಹ ರಾಜಕಾರಣಿಗಳು ನಮಗೆ ಬೇಕಿಲ್ಲ ಅಂತ ರೈ ಹೇಳಿದ್ದಾರೆ.