ಕೋಲಾರ: ಜನ್ಮ ನೀಡಿ ಕಷ್ಟಪಟ್ಟು ಸಾಕಿ ಬೆಳೆಸಿದ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ಮಕ್ಕಳು ಇರುವ ಇಂತಹ ಸಂದರ್ಭದಲ್ಲಿ ಇಲ್ಲಿ ವ್ಯಕ್ತಿ ಎಲ್ಲರಿಗೂ ಆದರ್ಶವಾಗಿದ್ದಾರೆ. ತಮ್ಮ ತಂದೆ-ತಾಯಿ ಮರಣ ನಂತರ ಅವರನ್ನು ಮನೆಯಲ್ಲಿಯೇ ಸಮಾಧಿ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ಚಿತ್ರನಟನ ಪ್ರತಿಮೆಯನ್ನು ರೂಪಿಸಿ ಮನೆಯ ಮೇಲೆ ಸ್ಥಾಪನೆ ಮಾಡಿದ್ದಾರೆ.
Advertisement
ಕೋಲಾರ ತಾಲೂಕು ಸೀಪುರ ಗ್ರಾಮದ ನಿವಾಸಿಯಾಗಿರುವ ನಾರಾಯಣಪ್ಪ ವೃತ್ತಿಯಲ್ಲಿ ಕುರಿಗಾಯಿ. ಕುರಿಕಾಯುವ ವೃತ್ತಿ ಮಾಡುತ್ತಿದ್ದರೂ ಇವರ ಆದರ್ಶ-ಅಭಿಮಾನ ಇಂದು ಎಲ್ಲರಿಗೂ ಮಾದರಿ ಎನ್ನುವಂತಿದೆ. ಏಕೆಂದರೆ ನಾರಾಯಣಪ್ಪನಿಗೆ ಅವರ ತಂದೆ ಬೆಂಗಳೂರು ಮುನಿಯಪ್ಪ ಹಾಗೂ ತಾಯಿ ಅಕ್ಕಳಮ್ಮ ಅಂದರೆ ಪಂಚಪ್ರಾಣ. 70 ವರ್ಷಗಳ ಹಿಂದೆ ಬೆಂಗಳೂರು ನಗರ ಬಿಟ್ಟು ಕೋಲಾರ ಗ್ರಾಮಕ್ಕೆ ಬಂದು ನೆಲೆಸಿದ ಇವರ ಕುಟುಂಬದ ಜೀವನ ತುಂಬಾ ಕಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ತಮ್ಮನ್ನು ಪ್ರೀತಿಯಿಂದ ಕಷ್ಟಪಟ್ಟು ಸಾಕಿ ಬೆಳೆಸಿದ್ದಾರೆ ಎನ್ನುವ ಅಭಿಮಾನದಿಂದ ಅವರ ಸಮಾಧಿಗೆ ನಿತ್ಯವೂ ಪೂಜಿಸುತ್ತಿದ್ದಾರೆ.
Advertisement
ಅಲ್ಲದೇ ನಾರಾಯಣಪ್ಪ ಚಿಕ್ಕ ವಯಸ್ಸಿನಿಂದಲೂ ತೆಲುಗು ಚಿತ್ರ ರಂಗದ ಸೂಪರ್‍ಸ್ಟಾರ್ ಎನ್.ಟಿ.ರಾಮ್‍ರಾವ್ ರವರ ಸಿನಿಮಾಗಳನ್ನು ನೋಡುತ್ತಾ ಅವರ ಸಿನಿಮಾದಲ್ಲಿನ ಆದರ್ಶಗಳನ್ನು ಪಾಲಿಸುತ್ತಾ ಬೆಳೆದವರು. ಆ ಕಾರಣಕ್ಕೆ ನಾರಾಯಣಪ್ಪ ಅವರು ಕಳೆದ ಹಲವು ವರ್ಷಗಳ ಹಿಂದೆಯೇ ತಮ್ಮ ಮನೆಯ ಮೇಲೆ ತನ್ನ ತಂದೆ ಹಾಗೂ ಎನ್‍ಟಿ ರಾಮ್‍ರಾವ್ ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿದ್ದಾರೆ.
Advertisement
Advertisement
ಇನ್ನೂ ತನ್ನ ತಂದೆ ಹಾಗೂ ತಾಯಿಯ ಸಮಾಧಿಯನ್ನು ತನ್ನ ಮನೆಯಲ್ಲೇ ನಿರ್ಮಾಣ ಮಾಡಿರುವ ನಾರಾಯಣಪ್ಪ, ಪ್ರತಿದಿನ ತನ್ನ ಮನೆಯ ಮೇಲೆ ನಿರ್ಮಾಣ ಮಾಡಿರುವ ತಂದೆ ಹಾಗೂ ಎನ್.ಟಿ. ರಾಮರಾವ್ ಪ್ರತಿಮೆಗಳಿನ್ನು ಶುಚಿಗೊಳಿಸಿ ನಂತರವೇ ತನ್ನ ಕೆಲಸ ಕಾರ್ಯಗಳನ್ನು ಅರಂಭಿಸುತ್ತಾರೆ. ಸುಮಾರು ವರ್ಷಗಳಿಂದ ತನ್ನ ಅಭಿಮಾನದ ಸಂಕೇತವಾಗಿ ನಿರ್ಮಾಣ ಮಾಡಿರುವ ನಾರಾಯಣಪ್ಪ ಚಂದ್ರಬಾಬು ನಾಯ್ಡು, ಬಾಲಕೃಷ್ಣರನ್ನು ಭೇಟಿ ಮಾಡಿ ತಮ್ಮ ಮನೆಗೆ ಬರುವಂತೆ ಮನವಿ ಮಾಡಿದ್ದಾರಂತೆ. ತನ್ನ ಬಳಿ ಇರುವ ಕುರಿಗಳನ್ನು ಮಾರಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ತಮ್ಮ ಅಭಿಮಾನದ ಪ್ರತಿಮೆಗಳನ್ನು ನೋಡಲು ಅವರು ಬಂದಿಲ್ಲಾ ಅನ್ನೋದು ನಾರಾಯಣಪ್ಪನ ಕೊರಗು ಅಂತಾರೆ ಅವರ ಮಕ್ಕಳು.
ಅನಕ್ಷರಸ್ಥರಾದರು ತನ್ನ ಹೆತ್ತವರ ಮೇಲೆ ಇವರಿಗಿರುವ ಪ್ರೀತಿ, ಎನ್ ಟಿ ಆರ್ ಮೇಲಿರುವ ಅಭಿಮಾನ ಎಲ್ಲರೂ ಮೆಚ್ಚುವಂತದ್ದು. ತಂದೆ-ತಾಯಿಯರನ್ನ ನೋಡಿಕೊಳ್ಳಲಾಗದೆ ವೃದ್ಧಾಶ್ರಮಗಳಿಗೆ ಸೇರಿಸುವ ಮಕ್ಕಳಿರುವ ಈ ಸಮಾಜದಲ್ಲಿ ಅವರು ಮಾದರಿಯಾಗಿದ್ದಾರೆ.