ಮತ್ತೆ ಮದುವೆ ವಿಚಾರದಲ್ಲಿ ತೆಲುಗು ನಟ ನರೇಶ್ (Naresh) ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದ್ದಾರೆ. ತಮ್ಮ ಲವ್ ಸ್ಟೋರಿಯನ್ನು ಹೇಳುವುದಕ್ಕಾಗಿಯೇ ಅವರು ಸಿನಿಮಾ ಮಾಡಿದ್ದು, ಮಾಜಿ ಪತ್ನಿ ಮೇಲಿನ ಕೋಪಕ್ಕೆ 15 ಕೋಟಿ ಖರ್ಚು ಮಾಡಿದ್ದಾರೆ. ಈ ಪ್ರಮಾಣದಲ್ಲಿ ಹಣ ಹಾಕಿ ‘ಮತ್ತೆ ಮದುವೆ’ (Matte Maduve) ಸಿನಿಮಾ ಮಾಡಿದ್ದು, ಈ ಸಿನಿಮಾದಲ್ಲಿ ತಾವೇಕೆ ಪವಿತ್ರಾ ಲೋಕೇಶ್ (Pavitra Lokesh) ಹಿಂದೆ ಬಿದ್ದೆ ಎನ್ನುವ ಕುರಿತು ಕಥೆಯನ್ನು ಹೇಳಿದ್ದಾರಂತೆ.
ನಿನ್ನೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ತಮ್ಮ ರಿಯಲ್ ಲೈಫ್ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿರುವುದು ಟ್ರೈಲರ್ ನಲ್ಲಿ ಗೊತ್ತಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಮೊದಲ ನೋಟ ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ:‘ಪಠಾಣ್’ ಸಕ್ಸಸ್ ನಂತರ ಸಿಹಿಸುದ್ದಿ ನೀಡಿದ ದೀಪಿಕಾ ಪಡುಕೋಣೆ
ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ್ದೇಗೆ? ಆ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ (Ramya) ರಘುಪತಿಯೇ ವಿಲನ್ ಆಗಿ ನಿಂತಿರುವುದು. ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು. ಮೈಸೂರು ಹೋಟೆಲ್ ನಲ್ಲಿ ನಡೆದ ಹೈಡ್ರಾಮಾ ಕಹಾನಿ. ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳೋದು. ಜನ ಹೀಯಾಳಿಸೋದು. ಹೀಗೆ ನಾನಾ ವಿಷಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ನರೇಶ್ ಲೈಫ್ ಸ್ಟೋರಿಯಲ್ಲಿ ಮೂರನೇ ಪತ್ನಿ ರಮ್ಯಾ ಅವರೇ ವಿಲನ್ ಆಗಿ ಕಾಣಿಸಿಕೊಂಡಿದ್ದರೆ, ಪವಿತ್ರಾ ಲೋಕೇಶ್ ಹಿನ್ನೆಲೆಯ ಕಥೆಯಲ್ಲಿ ವಿಲನ್ ಆಗಿ ನಿಂತವರು ಪತಿ ಸುಚೇಂದ್ರ ಪ್ರಸಾದ್ (Suchendra Prasad) ಎನ್ನುವಂತೆ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾಗೆ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ಹಿನ್ನೆಲೆಯ ಪಾತ್ರಗಳೇ ಖಳನಾಯಕರಾ? ಟ್ರೈಲರ್ ನೋಡಿದ ಮೇಲೆ ಇಂಥದ್ದೊಂದು ಪ್ರಶ್ನೆಯು ಮೂಡದೇ ಇರದು. ನೈಜ ಪಾತ್ರಗಳನ್ನು ಹೋಲುವಂತೆಯೇ ದೃಶ್ಯಗಳನ್ನು ಕಟ್ಟಿರುವುದರಿಂದ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ನೆನೆಪಾಗುವುದು ಸುಳ್ಳಲ್ಲ.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿದೆ.