ಮಂಗಳೂರು: ಖ್ಯಾತ ಬಹುಭಾಷಾ ನಟ ಮೋಹನ್ ಲಾಲ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದಿದ್ದಾರೆ.
ನಟ ಮೋಹನ್ ಲಾಲ್ ಇಂದು ಮುಂಜಾನೆ ದೇವರ ದರ್ಶನ ಪಡೆದು ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲಯಾಳಂ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ನಲ್ಲಿ ನಡೆಯುತ್ತಿತ್ತು. ಕೊಚ್ಚುನ್ನಿ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಿವಿನ್ ಪೌಲ್, ಪ್ರಿಯಾ ಆನಂದ್ ಸೇರಿದಂತೆ ಇತರ ಸಹ ನಟರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನೊಂದೆಡೆ ಬಹುಕೋಟಿ ವೆಚ್ಚದ ಮಮ್ಮುಟ್ಟಿ ನಟನೆಯ ಮಾಮಾಂಗಂ ಚಿತ್ರದ ಚಿತ್ರೀಕರಣ ಕೂಡಾ ಕಡಬದ ಕೊಯಿಲ ಫಾರ್ಮ್‍ನಲ್ಲಿ ನಡೆಯುತ್ತಿದೆ. ಎರಡೂ ಚಿತ್ರದ ನಟರಿಗೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಸಹ ನಟರೊಂದಿಗೆ ಸುಬ್ರಹ್ಮಣ್ಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೋಹನ್ ಲಾಲ್ ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದ್ದಾರೆ.