Bollywood
ನಟಿಯ ಕೊಳೆತ ಶವ ಮನೆಯಲ್ಲಿ ಪತ್ತೆ- ಕೊಲೆ ಶಂಕೆ

ಮುಂಬೈ: ರೂಪದರ್ಶಿ ಹಾಗೂ ನಟಿಯಾಗಿದ್ದ 23 ವರ್ಷದ ಯುವತಿಯ ಶವ ಮುಂಬೈನ ಅಂಧೇರಿಯ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿದೆ.
ಇಲ್ಲಿನ ಭೈರವನಾಥ್ ಎಸ್‍ಆರ್‍ಎ ಸೊಸೈಟಿಯ ನಿವಾಸಿಯಾಗಿದ್ದ ಕೃತಿಕಾ ಚೌಧರಿಯ ಶವ ಕೊಳೆತ ಸ್ಥಿತಿಯಕಲ್ಲಿ ಪತ್ತೆಯಾಗಿದ್ದು, 3-4 ದಿನಗಳ ಹಿಂದೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರದಂದು ಸುಮಾರು 3.45ರ ಸಮಯದಲ್ಲಿ ಕೃತಿಕಾ ಚೌಧರಿಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಕೃತಿಕಾ ಅವರ ರೂಮ್ ಹೊರಗಿನಿಂದ ಲಾಕ್ ಆಗಿತ್ತು. ನಂತರ ಒಳ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ರಮಿನಲ್ಲಿ ಎಸಿ ಆನ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ರೂಮಿನ ಎಸಿ ಆನ್ ಆಗಿದ್ದರಿಂದ ಶವದ ದುರ್ವಾಸನೆ ಬೇಗ ಹೋರಬಂದಿಲ್ಲ. 3-5 ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ನಟಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಕೃತಿಕಾ ಚೌಧರಿ ಕಂಗನಾ ರನಾವತ್ ಅಭಿನಯದ ರಜ್ಜೋ ಚಿತ್ರದಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ಕೆಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.
