ಮಿಲಿಂದ್ ಗೌತಮ್ ಈಗ ಅನ್ ಲಾಕ್ ರಾಘವ!

Public TV
2 Min Read
Milind Gautham

ಹೊಸ ವರ್ಷದ ಆರಂಭದಲ್ಲಿಯೇ ಹೊಸತನದ ಒಂದಷ್ಟು ಸಿನಿಮಾಗಳು ತೆರೆಗಾಣುವ ಸನ್ನಾಹದಲ್ಲಿದೆ. ಈ ವಾರ ಅಂದರೆ, ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿರುವ ‘ಅನ್ ಲಾಕ್ ರಾಘವ’ (Unlock Raghava) ಚಿತ್ರ ಕೂಡ ಅಂಥಾ ಭರವಸೆ ಮೂಡಿಸಿರೋ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್‌ನೊಂದಿಗೆ ಗಮನ ಸೆಳೆದಿರೋ ಈ ಸಿನಿಮಾ ಮೂಲಕ ಮಿಲಿಂದ್ ಗೌತಮ್ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸದರಿ ಟ್ರೈಲರ್‌ನಲ್ಲಿ ಮಿಲಿಂದ್ ಪಾತ್ರದ ಒಂದಷ್ಟು ಝಲಕ್‌ಗಳು ಜಾಹೀರಾಗಿವೆ. ನಟನೆ, ಸಾಹಸ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದು, ಪಳಗಿಕೊಂಡಿರುವ ಮಿಲಿಂದ್ ಗೌತಮ್ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

Milind Gautham 1

ಮೂಲತಃ ತೀರ್ಥಹಳ್ಳಿಯವರಾದ ಮಿಲಿಂದ್ ಗೌತಮ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಅದರ ಪರಿಧಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ವಿಪುಲ ಅವಕಾಶಗಳಿದ್ದರೂ ಬಣ್ಣದ ಜಗತ್ತೆಂಬುದು ಆರಂಭದಿಂದಲೂ ಅವರನ್ನು ಸೆಳೆಯುತ್ತಾ ಬಂದಿತ್ತು. ಹಾಗಂತ ನಟನಾಗಿಯೇ ಬಿಡಬೇಕೆಂಬ ತೀವ್ರವಾದ ಆಕಾಂಕ್ಷೆಯೇನೂ ಇರಲಿಲ್ಲ. ಇಂಥಾ ಮಿಲಿಂದ್ ಗೌತಮ್ ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದ್ದೇ ಅಚಾನಕ್ಕಾಗಿ. 2019ರ ಸುಮಾರಿಗೆ ‘ವೀಕೆಂಡ್’ ಎಂಬ ಚಿತ್ರ ಶುರುವಾಗಿತ್ತು. ಅದೊಂದು ದಿನ ಆ ಸಿನಿಮಾ ನಿರ್ದೇಶಕರು ಪುಟ್ಟ ಪಾತ್ರವೊಂದರಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರಂತೆ. ಆ ಮೂಲಕ ಕ್ಯಾಮೆರಾ ಮುಂದೆ ನಿಂತಿದ್ದ ಮಿಲಿಂದ್ ಪಾಲಿಗೆ ಅದಾಗಲೇ ಇದ್ದ ನಟನೆಯ ಆಸಕ್ತಿ ತೀವ್ರಗೊಂಡಿತ್ತು. ಇದನ್ನೂ ಓದಿ:ಬೆಂಗಳೂರಿನಲ್ಲಿ ಯಶ್‌ ಜೊತೆ ನಯನತಾರಾ ‘ಟಾಕ್ಸಿಕ್‌’ ಶೂಟಿಂಗ್‌ ಶುರು

Milind Gautham 3

ಅದಾದ ನಂತರ ವಿನಾಯಕ್ ಅವರ ಗರಡಿಯಲ್ಲಿ ನಟನೆ, ಸಾಹಸ, ಡ್ಯಾನ್ಸ್ ಮುಂತಾದವುಗಳಲ್ಲಿ ತರಬೇತಿ ಪಡೆದುಕೊಂಡಿದ್ದರು. ಅದೆಲ್ಲ ಆಗುತ್ತಲೇ ಮಂಜುನಾಥ್ ಡಿ ಅವರು ‘ಅನ್‌ಲಾಕ್ ರಾಘವ’ ಚಿತ್ರವನ್ನು ನಿರ್ಮಾಣ ಮಾಡಲು ತಯಾರಾಗಿದ್ದರು. ದೀಪಕ್ ಮಧುವನಹಳ್ಳಿ ಚೆಂದದ ಕಥೆ ಸಿದ್ಧಪಡಿಸಿಕೊಂಡು ಅದಾಗಲೇ ಪರಿಚಿತರಿದ್ದ ಮಿಲಿಂದ್ ಗೌತಮ್‌ಗೆ ನಾಯಕನಾಗೋ ಅವಕಾಶ ಕಲ್ಪಿಸಿದ್ದರು. ಆ ಹಂತದಲ್ಲಿಯೇ ಕಥೆ, ಡಿಸ್ಕಷನ್ನು, ತಯಾರಿಗಳೆಲ್ಲವೂ ಮುಗಿದು ಮಿಲಿಂದ್ ನಾಯಕ ನಟನಾಗಿದ್ದರು. ಹೀಗೆ ಆರಂಭಿಕ ಹೆಜ್ಜೆಯಲ್ಲಿಯೇ ಒಂದೊಳ್ಳೆ ಪಾತ್ರ, ಭಿನ್ನವಾದ ಕಥೆ ಮತ್ತು ಪ್ರತಿಭಾನ್ವಿತ ತಂಡದ ಸಾಥ್ ಸಿಕ್ಕ ಖುಷಿ ಅವರಲ್ಲಿದೆ.

Milind Gautham 4

ಇದು ಕಾಮಿಡಿ ಥ್ರಿಲ್ಲರ್ ಬಗೆಯ ಸಿನಿಮಾ. ಸತ್ಯಪ್ರಕಾಶ್ ಇದಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿ ರೂಪುಗೊಂಡಿರೋ ‘ಅನ್‌ಲಾಕ್ ರಾಘವ’ ಚಿತ್ರದಲ್ಲಿ ಶೋಭರಾಜ್, ಸಾಧು ಕೋಕಿಲಾ, ಕಡೂರು ಧರ್ಮಣ್ಣ, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಸುಂದರ್, ವೀಣಾ ಸುಂದರ್ ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರೆಚೆಲ್ ನಾಯಕಿಯಾಗಿ ಮಿಲಿಂದ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ಹಾಗೂ ಐಪ್ಲೆಕ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಮತ್ತು ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ. ಇದರೊಂದಿಗೆ ಹೊಸ ಪ್ರತಿಭೆ ಮಿಲಿಂದ್ ಗೌತಮ್ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳು ದಟ್ಟವಾಗಿಯೇ ಕಾಣಿಸುತ್ತಿವೆ.

Share This Article