– ಮದ್ವೆಗೆ ಖರ್ಚು ಮಾಡಬೇಕೆಂದಿದ್ದ ಹಣವನ್ನ ದೇಣಿಗೆ ನೀಡಿದ್ರು
ತಿರುವನಂತಪುರಂ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಮಲಯಾಳಂ ಚಿತ್ರರಂಗದ ಪ್ರಶಸ್ತಿ ವಿಜೇತ ನಟರೊಬ್ಬರು ದೇವಾಲಯದಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟ ಮಣಿಕಂದನ್ ಆಚಾರಿ ತಮ್ಮ ಗೆಳತಿ ಅಂಜಲಿಯನ್ನು ಭಾನುವಾರ ಮದುವೆಯಾಗಿದ್ದಾರೆ. ಯಾವುದೇ ಆಡಂಬರ, ಅದ್ಧೂರಿ, ಹೆಚ್ಚು ಜನರಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ತಮ್ಮ ಮದುವೆಗೆ ಖರ್ಚು ಮಾಡಬೇಕೆಂದುಕೊಂಡಿದ್ದ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
Advertisement
Advertisement
ಮಣಿಕಂದನ್ ಮತ್ತು ಅಂಜಲಿ ಮದುವೆ ಸಂದರ್ಭದಲ್ಲಿ ಕುಟುಂಬದವರು ಲಾಕ್‍ಡೌನ್ ನಿಯಮಗಳು ಪಾಲಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಮಾಸ್ಕ್ ಧರಿಸಿದ್ದರು.
Advertisement
ಮಣಿಕಂದನ್ ಮತ್ತು ಅಂಜಲಿ ಮದುವೆ ಆರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ತಮ್ಮ ಮದುವೆಯನ್ನು ಮುಂದೂಡಲು ಈ ಜೋಡಿ ಇಷ್ಟಪಡಲಿಲ್ಲ. ಹೀಗಾಗಿ ಎರಡೂ ಕುಟುಂಬದವರು ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ಕೇರಳದ ದೇವಾಲಯದಲ್ಲಿ ಕುಟುಂಬದ ಕೆಲವು ಮಂದಿಯ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
Advertisement
ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ಒಂದೂವರೆ ವರ್ಷದ ಹಿಂದೆ ದೇವಸ್ಥಾನವೊಂದರ ಉತ್ಸವದಲ್ಲಿ ಭೇಟಿಯಾಗಿದ್ದರು. ಪರಿಚಯ ಸ್ನೇಹವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ ಮದುವೆ ಮಾಡಿಸಿದ್ದಾರೆ.
ಈ ವೇಳೆ ಮಾತನಾಡಿದ ವರ ಮಣಿಕಂದನ್, “ಕೊರೊನಾ ಲಾಕ್‍ಡೌನ್‍ನಿಂದ ನಾವು ಸರಳವಾಗಿ ವಿವಾಹವಾಗಿದ್ದೇವೆ. ಅಲ್ಲದೇ ನಮ್ಮ ಮದುವೆಗೆ ಖರ್ಚು ಮಾಡಬೇಕೆಂದಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿರುವುದಕ್ಕೆ ನಮಗೆ ಸಂತಸವಾಗಿದೆ. ನಮ್ಮ ಮದುವೆ ಅದ್ಧೂರಿಯಾಗಿ ನಡೆಯಲಿಲ್ಲ ಎಂದು ನಮಗೆ ಬೇಸರವಾಗಿಲ್ಲ. ಇದು ಸಂಭ್ರಮ ಪಡುವ ಸಮಯವಲ್ಲ. ಯಾಕೆಂದರೆ ಇಡೀ ಜಗತ್ತು ಕೊರೊನಾದಿಂದ ಸಂಕಷ್ಟದಲ್ಲಿದೆ. ನಾವು ಯಾವಾಗ ಬೇಕಾದರೂ ಸಂಭ್ರಮಾಚರಣೆ ಮಾಡಬಹುದು” ಎಂದರು.
ನಮ್ಮ ಮದುವೆಯನ್ನು ಮುಂದೂಡದೆ ಎರಡು ಕುಟುಂಬದವರು ಸೇರಿ ದೇವಸ್ಥಾನದಲ್ಲಿ ಮಾಡಲು ನಿರ್ಧಾರ ತೆಗೆದುಕೊಂಡಿದ್ದರು. ಇದರ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ವಧು ಅಂಜಲಿ ಹೇಳಿದ್ದಾರೆ.
ಮಣಿಕಂದನ್ 2016ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತಾವು ನಟಿಸಿದ ಮೊದಲ ‘ಕಮ್ಮಟಿಪಾದ’ ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಮಣಿಕಂದನ್ ಗುರುತಿಸಿಕೊಂಡಿದ್ದಾರೆ.