ಬೆಂಗಳೂರು: ಚಲನಚಿತ್ರ ಖಳನಟ, ಕನ್ನಡ ಚಿತ್ರರಂಗದಲ್ಲಿ ಲಂಬು ನಾಗೇಶ್ ಎಂದೇ ಹೆಸರುವಾಸಿಯಾಗಿದ್ದ ಪೋಷಕ ನಟ ನಾಗೇಶ್ ಅವರು ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಾಗೇಶ್ ಅವರು ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
Advertisement
ಕಳೆದ ಐದು ದಿನಗಳಿಂದ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಾಗೇಶ್ ಅವರು ಚಿತ್ರರಂಗದಲ್ಲಿ ಲಂಬು ನಾಗೇಶ್ ಅಂತಲೇ ಪ್ರಸಿದ್ಧರಾಗಿದ್ದರು.
Advertisement
1992 ರಲ್ಲಿ ರಿಲೀಸ್ ಆದ ‘ಪೃಥ್ವಿರಾಜ್’ ಸಿನಿಮಾದ ಮೂಲಕ ಲಂಬು ನಾಗೇಶ್ ಮೊದಲ ಬಾರಿಗೆ ಸಿನಿಮಾದಲ್ಲಿ ನಟನೆ ಮಾಡಿದ್ದರು. ದೇವರಾಜ್ ಅಭಿನಯದ ‘ಹುಲಿಯಾ’, ಸಾಯಿಕುಮಾರ್ ನಟನೆಯ ‘ಪೋಲೀಸ್ ಸ್ಟೋರಿ-2’ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ ಪ್ರಮುಖ ಪಾತ್ರದಲ್ಲಿ ಲಂಬು ನಾಗೇಶ್ ಬಣ್ಣ ಹಚ್ಚಿದ್ದರು.
Advertisement
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕನ್ನಡದ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲಂಬು ನಾಗೇಶ್ ನಟಿಸಿದ್ದರು. ಇತ್ತೀಚೆಗೆ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಹಾಗೂ ದುರ್ಗಾ ಧಾರಾವಾಹಿಗಳಲ್ಲೂ ನಾಗೇಶ್ ನಟಿಸಿದ್ದರು. ಬನಶಂಕರಿಯಲ್ಲಿ ಶನಿವಾರ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ.