ಕಾಂತಾರ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟ ಕಿಶೋರ್ (Kishor), ಬಿಬಿಎಂಪಿ (BBMP) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರಕೆರೆ (Devarakere) ಕುರಿತಂತೆ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ದೇವರಕೆರೆ ಉಳಿಸುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ.
ಬೆಂಗಳೂರು (Bangalore) ದಕ್ಷಿಣ ಭಾಗದಲ್ಲಿರುವ ದೇವರಕೆರೆಗೆ 1000 ವರ್ಷಗಳ ಇತಿಹಾಸವಿದೆ. ಇದು ಹೊಯ್ಸಳ ಕಾಲದ ಕೆರೆ ಎಂದು ಹೇಳಲಾಗುತ್ತದೆ. ಮೊದಲು ಈ ಕೆರೆಯು ಅರಣ್ಯ ಇಲಾಖೆಯ ಸುಪರ್ದಿಯಲ್ಲಿತ್ತು. ಹತ್ತು ವರ್ಷಗಳ ಹಿಂದೆಯಷ್ಟೇ ಅರಣ್ಯ ಇಲಾಖೆಯು ಈ ಕೆರೆಯನ್ನು ಬಿಬಿಎಂಪಿ ಹಸ್ತಾಂತರ ಮಾಡಲಾಗಿದೆಯಂತೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದಾಗ ಶುದ್ಧ ನೀರಿನಿಂದ ಈ ಕೆರೆಯು ತುಂಬಿರುತ್ತಿತ್ತು ಎಂದಿದ್ದಾರೆ ಕಿಶೋರ್.
ಬಿಬಿಎಂಪಿ ತೆಕ್ಕೆಗೆ ಈ ಕೆರೆಯು ಯಾವಾಗ ಬಂತೋ ಅಲ್ಲಿಂದ ಹದಗೆಡಲು ಶುರುವಾಯಿತು ಎನ್ನುವುದು ಕಿಶೋರ್ ಆರೋಪ. ಅಭಿವೃದ್ಧಿ ಹೆಸರಿನಲ್ಲಿ ಈ ಕೆರೆಯನ್ನು ಕೊಂದುಬಿಟ್ಟಿದೆ ಬಿಬಿಎಂಪಿ ಎಂದಿದ್ದಾರೆ ನಟ. ಈ ಕೆರೆಯು ಹಾಳಾಗುವುದಕ್ಕೆ ಅನಗತ್ಯ ಕಾಮಗಾರಿಗಳಂತೆ. ಅಭಿವೃದ್ಧಿ ಹೆಸರಿನಲ್ಲಿ ಕೇವಲ ಐದೇ ಐದು ವರ್ಷದಲ್ಲಿ ಕೆರೆಯನ್ನು ಸಾಯಿಸಿದ್ದಾರೆ ಎನ್ನುವುದು ಕಿಶೋರ್ ಆರೋಪ. ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್
ಕಿಶೋರ್ ಕಾಳಜಿಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡದೊಂದು ಆಂದೋಲನವೇ ಶುರುವಾಗಬೇಕು ಎಂದಿದ್ದಾರೆ. ಸ್ಥಳೀಯ ನಿವಾಸಿಗಳು ಈ ಕೆರೆಯ ಕುರಿತು ದೊಡ್ಡಮಟ್ಟದಲ್ಲೇ ಧ್ವನಿ ಎತ್ತಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.