ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್‌

Public TV
2 Min Read
sudeep

ರಾಜ್ಯ ಸರ್ಕಾರ ಘೋಷಿಸಿದ್ದ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್‌ ನಿರಾಕರಿಸಿದ್ದಾರೆ.

2019ರ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು (2019 State Fim Awards) ಕರ್ನಾಟಕ ಸರ್ಕಾರವು ಘೋಷಿಸಿತ್ತು. ‘ಪೈಲ್ವಾನ್‌’ ಸಿನಿಮಾಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಸುದೀಪ್‌ (Sudeep) ಆಯ್ಕೆ ಮಾಡಿತ್ತು. ಆದರೆ ರಾಜ್ಯ ಪ್ರಶಸ್ತಿ ನಿರಾಕರಿಸಿ ಈ ಕುರಿತು ಸುದೀರ್ಘವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಕಿಚ್ಚ ಪ್ರತಿಕ್ರಿಯಿಸಿ, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪ್ರಶಸ್ತಿಗಳನ್ನು ನಾನು ಎಂದೂ ನಿರೀಕ್ಷಿಸಲ್ಲ. ಹಲವು ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸೋದನ್ನು ನಿಲ್ಲಿಸಿದ್ದೇನೆ. ವೈಯಕ್ತಿಕ ಕಾರಣಗಳಿಗಾಗಿ ನಾನು ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ಅನೇಕ ಅರ್ಹ ನಟರು ಸಿನಿಮಾಗಾಗಿ ಕಷ್ಟಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಈ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಲು ಖುಷಿ ಕೊಡುತ್ತದೆ. ನನ್ನ ಗುರಿ ಜನರನ್ನು ರಂಜಿಸುವುದು. ಅದು ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆಯೇ ಇರುತ್ತದೆ ಎಂದು ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

SUDEEP

ನನ್ನನ್ನು ರಾಜ್ಯ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ಜ್ಯೂರಿ ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ನನ್ನ ಕಲೆಯನ್ನು ನೀವು ಗುರುತಿಸಿರೋದು ನನ್ನ ಕೆಲಸಕ್ಕೆ ಸಿಕ್ಕಿರುವ ತಕ್ಕ ಪ್ರತಿಫಲ. ನನ್ನ ನಿರ್ಧಾರವು ಬೇಸರವುಂಟು ಮಾಡಬಹುದು. ತೀರ್ಪುಗಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಹಾಗೂ ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಟ ಬರೆದುಕೊಂಡಿದ್ದಾರೆ.

Share This Article