ರಮ್ಯಾ ಒಳ್ಳೆಯ ನಟಿ, ಕಮ್ ಬ್ಯಾಕ್ ರಮ್ಯಾ ಎಂದ ಜಗ್ಗೇಶ್

Public TV
2 Min Read
jaggesh ramya

ಬೆಂಗಳೂರು: ನಟಿ ರಮ್ಯಾ ಅವರನ್ನು ನಾನು ವೈಯಕ್ತಿಕವಾಗಿ ಇಷ್ಟ ಪಡುವೆ, ಒಳ್ಳೆಯ ನಟಿ ಕಮ್ ಬ್ಯಾಕ್ ರಮ್ಯಾ ಎಂದು ನಟ ನವರಸ ನಾಯಕ ಜಗ್ಗೇಶ್ ರಮ್ಯಾರನ್ನು ಹಾಡಿ ಹೊಗಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ರಮ್ಯಾ ಮತ್ತೆ ಸಿನಿಮಾ ಮಾಡಲಿ ಎಂದು ಹಾರೈಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ರಮ್ಯಾ ಹಾಟ್ ಸೀಟ್‍ನಲ್ಲಿ ಕೂತಿದ್ದರು. ಆಗ ಅವರು ಪುನೀತ್‍ಗೆ ಜಗ್ಗೇಶ್ ಅವರ ಇಮಿಟೇಟ್ ಮಾಡಿ ಎಂದು ಹೇಳುತ್ತಾರೆ. ಆಗ ಜಗ್ಗೇಶ್ ಅಭಿನಯದ ‘ತರ್ಲೆ ನನ್ ಮಗ’ ಸಿನಿಮಾದ ಡೈಲಾಗ್‍ನ್ನು ಪುನೀತ್ ಹೇಳುತ್ತಾರೆ. ಅಲ್ಲದೆ ಇದು ಪುನೀತ್ ಅವರಿಗೆ ತುಂಬ ಇಷ್ಟವಾದ ಸಿನಿಮಾವಂತೆ. ಈ ವಿಡಿಯೋವನ್ನು ಜಗ್ಗೇಶ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/B8tLQo8Jl1p/

ಅಲ್ಲದೆ ವಿಡಿಯೋ ಪೋಸ್ಟ್ ಜೊತೆಗೆ ಸಾಲುಗಳನ್ನು ಬರೆದಿರುವ ಅವರು, “ನನ್ನ ಇಮಿಟೇಟ್ ಮಾಡಿದ ವಿಡಿಯೋ ಖುಷಿ ಕೊಟ್ಟಿತು. ಕೆಲ ವೈಯಕ್ತಿಕ ಸಿದ್ಧಾಂತಗಳಿಂದ ಮನಸ್ಸು ಹಾಳಾಯಿತು. ವೈಯಕ್ತಿಕವಾಗಿ ನಾನು ಈಕೆಯನ್ನು ಬಹಳ ಇಷ್ಟಪಡುವೆ. ಈಕೆ ಒಳ್ಳೆಯ ನಟಿ, ಮತ್ತೆ ಈಕೆ ನಟಿಸಲಿ ಎಂದು ಹಾರೈಸುವೆ. ಕಮ್ ಬ್ಯಾಕ್ ರಮ್ಯಾ” ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ನಟಿ ರಮ್ಯಾ ಹಾಗೂ ಹಿರಿಯ ನಟ ಜಗ್ಗೇಶ್ ಹಿಂದಿನಿಂದಲೂ ಸಿದ್ಧಾಂತಗಳ ವಿಷಯದಲ್ಲಿ ಹಾಗೂ ರಾಜಕೀಯದ ವಿಚಾರವಾಗಿ ಕಡುವೈರಿಗಳು ಎಂಬುದು ತಿಳಿದೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾವು ಮುಂಗುಸಿಯಂತೆ ಯಾವಾಗಲೂ ಕಚ್ಚಾಡುತ್ತಿರುತ್ತಿದ್ದರು. ಒಂದೊಮ್ಮೆ ನೀರ್‍ದೋಸೆ ಸಿನಿಮಾ ಸಲುವಾಗಿ ಸಾಕಷ್ಟು ಗದ್ದಲ ಸಹ ಏರ್ಪಟ್ಟಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೇ ಜಗ್ಗೇಶ್ ಟಾಂಗ್ ನೀಡಿದ್ದರು. ಆದರೆ ಇದೀಗ ಅಚ್ಚರಿ ಎಂಬಂತೆ ಜಗ್ಗೇಶ್ ರಮ್ಯಾ ಅವರನ್ನು ಹಾಡಿ ಹೊಗಳಿದ್ದಾರೆ.

1916134 204266900195 1080418 n

ರಮ್ಯಾ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿದ್ದರು. ನಟ ಜಗ್ಗೇಶ್ ಪಕ್ಕಾ ಬಿಜೆಪಿ ಪರ. ಹೀಗಾಗಿ ಚುನಾವಣೆ ಸಮಯದಲ್ಲಂತೂ ರಮ್ಯಾ ಬಗ್ಗೆ ಜಗ್ಗೇಶ್ ಆರೋಪ ಮಾಡುತ್ತಲೇ ಇರುತ್ತಿದ್ದರು. ಅಲ್ಲದೆ ರಮ್ಯಾ ಸಹ ಜಗ್ಗೇಶ್ ಬಗ್ಗೆ ದನಿಯೆತ್ತುತ್ತಲೇ ಇರುತ್ತಿದ್ದರು. ಇದು ಹಲವು ಬಾರಿ ದೊಡ್ಡ ಸುದ್ದಿಯಾಗುತ್ತಿತ್ತು. ಪ್ರತಿ ಬಾರಿ ನರೇಂದ್ರ ಮೋದಿ ಹಾಗೂ ಅವರ ಅಭಿಮಾನಿಗಳ ವಿರುದ್ಧ ರಮ್ಯಾ ಮಾತನಾಡಿದಾಗ ಜಗ್ಗೇಶ್ ಸರಿಯಾಗಿ ಟಾಂಗ್ ನೀಡುತ್ತಿದ್ದರು.

ಅಲ್ಲದೆ ಜಗ್ಗೇಶ್ ಅಭಿನಯದ ‘ನೀರ್‍ದೋಸೆ’ ಸಿನಿಮಾದಲ್ಲಿ ರಮ್ಯಾ ನಟಿಸಬೇಕಿತ್ತು. ಮೊದಲು ಒಪ್ಪಿ, ನಂತರದಲ್ಲಿ ನಿರ್ದೇಶಕ, ನಿರ್ಮಾಪಕರನ್ನು ರಮ್ಯಾ ಸರಿಯಾಗಿ ಕಾಯಿಸಿದ್ದರು. ಆಗ ಇವರಿಬ್ಬರ ಮಧ್ಯೆ ವೈಮನಸ್ಸು ಇನ್ನೂ ಹೆಚ್ಚಾಯಿತು. ಜಗ್ಗೇಶ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಅದು ರಾಜಕೀಯ ವಿಷಯದಲ್ಲಿ ಮತ್ತೆ ಮುಂದುವರಿದಿತ್ತು. ಇತ್ತೀಚೆಗೆ ರಮ್ಯಾ ಮದುವೆಯಾಗಲಿದ್ದಾರೆ ಎಂಬ ವಿಚಾರ ಕೇಳಿಬಂದಾಗ ಜಗ್ಗೇಶ್ ಶುಭಕೋರಿದ್ದರು.

jaggesh in neerdose 146976971200

ನಟಿ ರಮ್ಯಾ ಸುಳಿವಿಲ್ಲದೆ ತಿಂಗಳುಗಳೇ ಉರುಳಿದವು. ಸಿನಿಮಾ ರಂಗದಿಂದ ದೂರ ಸರಿದ ಸ್ಯಾಂಡಲ್‍ವುಡ್ ಕ್ವೀನ್ ರಾಜಕೀಯದತ್ತ ಒಲವು ತೋರಿದರು. ಸಿನಿಮಾ ರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹಾಗೂ ಸ್ನೇಹಿತರನ್ನು ಹೊಂದಿದ್ದ ರಮ್ಯಾ, ಸ್ಟಾರ್ ನಟರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಹೀಗಾಗಿ ಸ್ಯಾಂಡಲ್‍ವುಡ್‍ನಲ್ಲಿ ಹಲವರ ಫೇವರಿಟ್ ಆಗಿದ್ದ ರಮ್ಯಾರಿಗೆ ದೊಡ್ಡ ಮೊತ್ತದ ಸಂಭಾವನೆ ಸಹ ನೀಡಲಾಗುತ್ತಿತ್ತು.

12496031 10153824956995196 2093600700390452711 o

ಎಷ್ಟೋ ಸ್ಟಾರ್ ನಟರು ಇವರ ಜೊತೆ ನಟಿಸಬೇಕು ಎಂದು ಆಸೆಯಿಟ್ಟುಕೊಂಡಿದ್ದರು. ಯಶ್ ಅವರಿಗೂ ಈ ಸ್ಯಾಂಡಲ್‍ವುಡ್ ಕ್ವೀನ್ ಜೊತೆ ನಟಿಸಬೇಕೆಂಬ ಆಸೆ ಇತ್ತಂತೆ. ಇದನ್ನು ಅವರೇ ಒಮ್ಮೆ ಹೇಳಿಕೊಂಡಿದ್ದರು. ತದನಂತರದಲ್ಲಿ ಯಶ್ ಮತ್ತು ರಮ್ಯಾ ಕಾಂಬಿನೇಶನ್‍ನಲ್ಲಿ ‘ಲಕ್ಕಿ’ ಸಿನಿಮಾ ಮೂಡಿಬಂತು.

Share This Article
Leave a Comment

Leave a Reply

Your email address will not be published. Required fields are marked *