ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟೀವ್ ಆಗಿರುವ ನಟರಲ್ಲೊಬ್ರು ಅಂದ್ರೆ ಅವರು ನವರಸನಾಯಕ ಜಗ್ಗೇಶ್ (Jaggesh), ತಾಯಿ ಬಗೆಗಿನ ನೆನಪಿನ ಭಾವನೆಯನ್ನು ಜಗ್ಗೇಶ್ ಆಗಾಗ ಇದೇ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳೋದುಂಟು. ಇದೀಗ ಜಗ್ಗೇಶ್ ಪತ್ರಿಕೆಯಲ್ಲಿ ಬಂದಿದ್ದ ಒಂದು ಸುದ್ದಿಯ ಫೋಟೋ ಹಾಕಿ ಮನದ ದುಗುಡ ಹೊರಹಾಕಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಗನೇ ತಾಯಿಯನ್ನ ಕೊಂದ ಘಟನೆ ದಿನಪತ್ರಿಕೆಯಲ್ಲಿ ಸುದ್ದಿಯಾಗಿದೆ. ಈ ಸುದ್ದಿ ಪ್ರತಿಯನ್ನ ಹಂಚಿಕೊಂಡ ಜಗ್ಗೇಶ್ ತಮ್ಮ ತಾಯಿಯ ನೆನಪನ್ನ ಹಂಚಿಕೊಂಡು ಭಾವುಕರಾದಂತೆ ಪದಗಳನ್ನ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿ ಫೋಟೋ ಹಾಗೂ ಇದುವರೆಗು ತಾವು ಜೋಪಾನವಾಗಿ ಇಟ್ಟುಕೊಂಡಿರುವ ತಾಯಿಯ ಸೀರೆ ಅವರು ಬಳಸುತ್ತಿದ್ದ 10 ಪೈಸೆ ನಾಣ್ಯ ಇನ್ನಿತರ ವಸ್ತುಗಳ ಫೋಟೋವನ್ನೂ ತೋರಿಸಿದ್ದಾರೆ. ತಮಗೆ 29 ವರ್ಷ ಇದ್ದಾಗಲೇ ತಾಯಿಯನ್ನ ಕಳೆದುಕೊಂಡಿರೋದಾಗಿ ಹೇಳಿಕೊಂಡಿರುವ ಜಗ್ಗೇಶ್ ತಮ್ಮ 62ನೇ ವಯಸ್ಸಿನಲ್ಲೂ ಅಮ್ಮ ಬಳಸಿದ ವಸ್ತುಗಳನ್ನ ದೇವರ ಮನೆಯಲ್ಲಿಟ್ಟು ಈಗಲೂ ಪೂಜಿಸುವುದು ನಿತ್ಯ ಆಚರಣೆ ಎಂದಿದ್ದಾರೆ.
ಅಮ್ಮನನ್ನೇ ಮಗ ಕೊಲೆ ಮಾಡಿದ ಎಂದು ಸುದ್ದಿ ಓದಿ ಭಾವುಕರಾದ ಜಗ್ಗೇಶ್ ದಿನಚರಿ ಮರೆತು ಸ್ನಾನ ಪೂಜೆ ಇಲ್ಲದೆ ಶವದಂತೆ ಕುಳಿತುಬಿಟ್ಟರಂತೆ, ಹೀಗಾಗಿ ನೊಂದು ಮಾತು ಮುಂದುವರೆಸಿದ ಜಗ್ಗೇಶ್ `ತಂದೆ ತಾಯಿ ನೋಯಿಸುವವರು ನರಕ ಇಲ್ಲೇ ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಹೀಗೆ ಬರಹ ಮುಂದುವರೆಸಿರುವ ಜಗ್ಗೇಶ್ ಸಮಾಜ ಎತ್ತ ಸಾಗ್ತಿದೆ, ಇನ್ನೆಂಥ ದುರ್ದಿನಗಳನ್ನ ನಾವು ನೋಡಬೇಕಿದೆ, ಸಸಿ ಇದ್ದಾಗ ಸರಿ ಮಾಡಬೇಕು ಹೆಮ್ಮರವಾದ್ಮೇಲೆ ಸರಿ ಮಾಡಲಾಗದು ಎಂದು ಬುದ್ಧಿಮಾತು ಹೇಳಿದ್ದಾರೆ ಜಗ್ಗೇಶ್. ಅಂದಹಾಗೆ ಜಗ್ಗೇಶ್ ಈಗಲೂ ತಮ್ಮ ಕತ್ತಲ್ಲಿ ತಾಯಿ ಧರಿಸುತ್ತಿದ್ದ ಮಾಂಗಲ್ಯ ಸರ ಧರಿಸುತ್ತಾರೆ. ತಾಯಿ ಬಗ್ಗೆ ಆಗಾಗ ತಮ್ಮ ನೆನಪುಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ.