ಇನ್ಮುಂದೆ ನಂಗೂ ಡಬ್ಬಿಂಗ್‍ಗೂ ಯಾವುದೇ ಸಂಬಂಧ ಇರಲ್ಲ: ನಟ ಜಗ್ಗೇಶ್

Public TV
2 Min Read
jaggesh tweet 2

ಬೆಂಗಳೂರು: ಇನ್ನು ಮುಂದೆ ನನಗೂ ಡಬ್ಬಿಂಗ್ ಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ನಟ ಜಗ್ಗೇಶ್ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಬಗ್ಗೆ ನಟ ಜಗ್ಗೇಶ್ ಅವರೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.”ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವನು. ಕನಸಿನಲ್ಲಿಯು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಬಯಸೋದು ಇಲ್ಲ. ರಾಯರ ಭಕ್ತರು ತಪ್ಪು ಮಾಡುವವರಲ್ಲ. ನನಗೆ ನನ್ನ ಕನ್ನಡ ಭಾಷೆ, ಕನ್ನಡ ಜನರೆ ದೇವರು ಎಂದು ಭಾವಿಸಿ ಶ್ರದ್ಧೆಯಿಂದ ಯಾವ ತಪ್ಪು ಮಾಡದೇ ಬದುಕಿರುವೆ. ನನ್ನ ಮೇಲಿನ ಅಪಾರ್ಥ ಸರಿಪಡಿಸಲು ಈ ಬರಹ ಬರೆದಿದ್ದಾನೆ. ಆದ್ದರಿಂದ ಇದನ್ನು ಓದಿ ಬಿನ್ನಾಭಿಪ್ರಾಯ ಇದ್ದರೆ ಮರೆತು ಬಿಡಿ” ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡಬ್ಬಿಂಗ್ ಚಿತ್ರ ಬಿಡುಗಡೆಯಾದ್ರೆ ಆ ಚಿತ್ರಮಂದಿರಕ್ಕೆ ಬೆಂಕಿ: ಜಗ್ಗೇಶ್

JAGGESH

“ಮಾನ್ಯರೆ 36 ವರ್ಷ ಕನ್ನಡ ಚಿತ್ರರಂಗದಲ್ಲಿ ದುಡಿದು ಚಿತ್ರರಂಗದ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಉದ್ಯಮ ಕರೆದ ಡಬ್ಬಿಂಗ್ ವಿರುದ್ಧದ ಸಭೆಗೆ ನಾನು ಹೋಗಿದ್ದು ನಿಜ. ನಮ್ಮ ಅಕ್ರೋಶವೂ ನಿಜ. ಆದರೆ ಅದಷ್ಟು ನಮ್ಮ ಕಲಾವಿದರು ತಂತ್ರಜ್ಞರಿಗಾಗಿ ಮಾತ್ರವೇ ವಿನಾಃ ಯಾವ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ಸಂವಿಧಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲ” ಎಂದು ಹೇಳಿದ್ದಾರೆ.

“ಕನ್ನಡಿಗರಿಗೆ ಏನು ಇಷ್ಟವೂ ಅದನ್ನು ನೋಡಲು, ಪಡೆಯಲು ಕನ್ನಡಿಗರು ಸರ್ವಸ್ವತಂತ್ರರು. ಇನ್ನು ಮುಂದೆ ನನಗೂ ಡಬ್ಬಿಂಗ್ ಗೂ ಯಾವುದೇ ಸಂಬಂಧವೂ ಇರುವುದಿಲ್ಲ. ನಾನಾಯಿತು ನನ್ನ ಕಲಾ ಕರ್ತವ್ಯವಾಯಿತು. ನನ್ನ ಹಿಂದಿನ ನಡಾವಳಿಗೆ ನಿಮಗೆ ನೋವಾಗಿದ್ದರೆ ಕ್ಷಮೆಯಿರಲಿ. ನಾನು ನಿಮ್ಮವನು ವಯಸ್ಸಿನಲ್ಲಿ ಹಿರಿಯನಾದರೆ, ಸಹೋದರನು ಎಂಬು ಭಾವಿಸಿ ನಗು ಸಂತೋಷವಾಗಿ ಬಾಳಿ. ಶುಭ ಹಾರೈಕೆ ಕನ್ನಡದ ಮನಗಳಿಗೆ” ಎಂದು ಜಗ್ಗೇಶ್ ಬರೆದು ಕೊಂಡಿದ್ದಾರೆ.

Jaggesh Premier Padmini 1

ಜಗ್ಗೇಶ್ ಹಿಂದೆ ಹೇಳಿದ್ದು ಏನು?
ತಮಿಳು ನಟ ಅಜಿತ್ ಅಭಿನಯದ ತಮಿಳಿನ `ಎನ್ನೈ ಎರಿಂದಲ್’ ಚಿತ್ರವನ್ನು 2017ರ ಮಾರ್ಚ್ ತಿಂಗಳಿನಲ್ಲಿ ಕನ್ನಡಕ್ಕೆ `ಸತ್ಯದೇವ್ ಐಪಿಎಸ್’ ಮೂಲಕ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆದಿತ್ತು. ಇದರ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿ, ನಟ ಜಗ್ಗೇಶ್, ನಿರ್ಮಾಪಕ ಸಾರಾ ಗೋವಿಂದ್ ಹಾಗೂ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿತ್ತು. ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಜಗ್ಗೇಶ್, ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರ ಬಿಡುಗಡೆಯಾಗಬಾರದು. ನಾನು ಜೈಲಿಗೆ ಹೋದರೂ ಚಿಂತೆಯಿಲ್ಲ. ಒಂದು ವೇಳೆ ಬಿಡುಗಡೆಯಾದರೆ ಆ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ ಆಕ್ರೋಶ ವ್ಯಕ್ತಪಡಿಸಿದ್ದರು.

ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದರ ಕುರಿತು ಚಿತ್ರದ ವಿತರಕರು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ)ಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಸಿಸಿಐ ಕರ್ನಾಟಕ ಚಲನಚಿತ್ರ ಮಂಡಳಿಗೆ 9,72,943 ರೂ. ನಟ ಜಗ್ಗೇಶ್ ಗೆ 2,71,286 ರೂ. ಹಾಗೂ ನಿರ್ಮಾಪಕ ಸಾರಾ ಗೋವಿಂದು ಅವರಿಗೆ 15,121 ರೂ. ದಂಡವನ್ನು ವಿಧಿಸಿತ್ತು.

ದಂಡ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಜಗ್ಗೇಶ್, ನಾನು ಉದ್ಯಮಕ್ಕೋಸ್ಕರ ಹೋರಾಟ ಮಾಡಿದ್ದೇನೆಯೇ ಹೊರತು, ಜಗ್ಗೇಶ್‍ಗಾಗಿ ಅಲ್ಲ. ಕನ್ನಡ ಫಿಲ್ಮ್ ಚೇಂಬರ್ ಕರೆದಿದ್ದಕ್ಕೆ ನಾನು ಹೋಗಿದ್ದೆ. ಯಾವುದೇ ಸ್ವಾರ್ಥವಿಟ್ಟುಕೊಂಡು ಹೋರಾಟಕ್ಕೆ ಹೋಗಿರಲಿಲ್ಲ. ಡಬ್ಬಿಂಗ್ ಮಾಡುವವರಿಗೆ ನಷ್ಟ ಆಗಿರಬೇಕು, ಹೀಗಾಗಿ ದಂಡ ಹಾಕಿಸಿದ್ದಾರೆ ಎಂದು ವ್ಯಂಗ್ಯವಾಗಿ ಕಿಡಿಕಾರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *