ಬೆಂಗಳೂರು: ನನ್ನ ಸಾಕುತಾಯಿ ಮೋರುಬಾಯ್ ಇಂದು ನಿಧನರಾಗಿದ್ದಾರೆ ಎಂದು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
“ನನ್ನ ಸಾಕು ತಾಯಿ ಮೋರುಬಾಯ್ ಜನ್ಮ ಕೊಟ್ಟ ನನ್ನ ತಾಯಿ ಬಳಿ ಸಂಗಾತಿಯಾಗಲು ಹೋಗಿಬಿಟ್ಟಳು. ಕಳೆದ ವಾರ ಹರಸಿ ಕಳಿಸಿದಳು. ಇಂದು ಹರಸಲಾಗದ ಕಣ್ಣಿಗೆ ಕಾಣದ ದೂರದ ಊರಿಗೆ ಹೋಗಿಬಿಟ್ಟಳು. ಇಷ್ಟೆ ಅಲ್ಲವೆ ಮನುಜನ್ಮ. ಅವಳ ಕೈ ತುತ್ತು ತಿಂದ ನಾನು ಅವಳ ಮರೆಯಲು ಸಾಧ್ಯವೇ? ನನಗೆ ಮಮತೆ ತೋರಿ ತುತ್ತು ತಿನ್ನಿಸಿದ ಕಡೆ ತಾಯಿ ಪ್ರೀತಿಯ ಕೊಂಡಿಯೂ ಹೋಯಿತು. ಅಮ್ಮನಂತೆ ಇವಳು, ಇನ್ನುಮುಂದೆ ನೆನಪು ಮಾತ್ರ. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ” ಎಂದು ತಾಯಿ ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಜಗ್ಗೇಶ್ ತಾಯಿ ನಂಜಮ್ಮ ಅವರ ಸ್ನೇಹಿತೆಯೇ ಮೋರು ಬಾಯ್. ಇವರ ಜೊತೆ ಜಗ್ಗೇಶ್ ಬಾಲ್ಯದಿಂದಲೇ ಬೆಳೆದಿದ್ದರು. ಹೀಗಾಗಿ ತಾಯಿಯ ಪ್ರೀತಿ ಬಾಂಧವ್ಯವನ್ನು ಇವರ ಜೊತೆ ಹೊಂದಿದ್ದರು. ಕಳೆದವಾರಷ್ಟೇ ಮೋರುಬಾಯ್‍ಯನ್ನು ಭೇಟಿ ಮಾಡಿ ಅವರ ಬಗ್ಗೆ ಒಂದು ಪೋಸ್ಟ್ ಬರೆದು ಹಾಕಿದ್ದರು.
Advertisement
ಪೋಸ್ಟ್ ನಲ್ಲಿ ಏನಿತ್ತು?
ನಾನು ಹುಟ್ಟಿದಾಗಿಂದ ನನ್ನ ಲಾಲನೆ ಪಾಲನೆ ಮಾಡಿದ ನನ್ನ ಎರಡನೆ ತಾಯಿ ಮೋರುಬಾಯ್. ನಾನು ಆಕೆಯನ್ನು ಅಕ್ಕ ಎಂದು ಕರೆಯುತ್ತೇನೆ. ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ. ನನ್ನ ಅಮ್ಮನಿಗಿಂತ 9 ವರ್ಷ ಹಿರಿಯಳು. ಈಕೆಗೆ ಈಗ 90 ವರ್ಷ. ಸಾವಿನ ಬಾಗಿಲಿಗೆ ಅಕ್ಕ ಮುಖಮಾಡಿ ಮಾತು ನಿಂತು ನನಗಾಗಿ ಹಂಬಲಿಸಿದ್ದಾಳೆ. ಕೇದಾರನಾಥ ಸನ್ನಿಧಿಯಿಂದ ಬಂದಾಗ ವಿಷಯ ತಿಳಿದು ಓಡಿಹೋದೆ. ಅವಳ ಬಳಿ ಹೋದಾಗ ನಿಂತಮಾತು ಮುಚ್ಚಿದ ಕಣ್ಣು ನಾನು ಅಕ್ಕ ಎಂದು ಕೂಗಿದಾಗ ಕಣ್ಣು ತೆರೆದು ಮಾತು ಮತ್ತೆ ಶುರುವಾಯ್ತು. ಹರಸಿದಳು ನಮಿಸಿದಳು ನನ್ನ ಬಾಲ್ಯ ನೆನಪಾದಳು ಅಳಿಸಿದಳು. ಇದೆ ಅಲ್ಲವೆ ಸಾಕಿದ ಋಣ. ಅಮ್ಮನಿಲ್ಲದ ನನಗೆ 26 ವರ್ಷದಿಂದ ಅಮ್ಮನ ಪ್ರೀತಿ ತೋರುತ್ತಿದ್ದಳು.
Advertisement
ನನ್ನ ತಂದೆ ಸಾವಿನ ಕಬಂದ ಬಾಹು ಅಪ್ಪುವ ಸಮಯ ಪಕ್ಕದಲ್ಲಿ ಇದ್ದು ಭಾರವಾದ ಹೃದಯದಿಂದ ಅಳುತ್ತ ಅಪ್ಪನ ಕಳಿಸಿಕೊಟ್ಟೆ. ನನ್ನ ದುರ್ವಿಧಿ ಮತ್ತೆ ನನಗೆ ತಿನ್ನಿಸಿ ಆಡಿಸಿದ ಪ್ರೀತಿಯ ಸಾಕು ತಾಯಿ ಅಪ್ಪನಂತೆ ಅನ್ನ ಮಣ್ಣಿನ ಋಣ ತೀರಿಸುವ ಮುನ್ನ ನನ್ನ ಪ್ರೀತಿಯಿಂದ ಮಾತಾಡಿಸಿ ಹರಸಿದಳು. ನನಗೆ ಪ್ರೀತಿಕೊಟ್ಟು ತಾಯಿಯಂತೆ ಪ್ರೀತಿಸಿದ ಆತ್ಮ ನನ್ನ ಬಿಟ್ಟು ಬಾರದ ಊರಿಗೆ ಗಂಟುಮೂಟೆ ಕಟ್ಟುತ್ತಿದ್ದಾಳೆ. ನನಗೆ ತಿಳಿದಿದ್ದು ಒಂದೆ ಶಿವಧ್ಯಾನ ಮಾಡುತ್ತಿರು ನಿಲ್ಲಿಸಬೇಡ ಅಕ್ಕ. ನಿನಗಾಗಿ ಕೈಲಾಸದಿಂದ ಇಳಿದು ಶಿವ ಬರುತ್ತಾರೆ ಎಂದು ಧೈರ್ಯತುಂಬಿದೆ.
https://www.instagram.com/p/BzQv4WWHk-t/
ಸಾವಿನ ಲೆಕ್ಕಾಚಾರ ಜಗದ ನಿಯಮ. ಮನುಷ್ಯನ ಕೊನೆ ದಿನ ಹಾಗೂ ನನ್ನ ಪ್ರೀತಿಸಿ ಬೆಳೆಸಿದ ನನ್ನ ಬಾಲ್ಯಕಂಡ ಕೊನೆ ಪ್ರೀತಿಯ ದೇವರ ಉಸಿರು ನಿಂತ ಮೇಲೆ ತಿಳಿಸಿ ಎಂದು ಹೇಳಿ ಅವಳ ಸಾವು ಬರುವುದು ನೋಡಲಾಗದೆ ಬಂದುಬಿಟ್ಟೆ. ಇರುವವರೆಗೂ ನಮ್ಮವರು ಹೋದ ಮೇಲೆ ನೆನಪು ಮಾತ್ರ. ಭಾರವಾಯ್ತು ನನ್ನ ಮನಸ್ಸು, ನನ್ನ 56ನೇ ವಯಸ್ಸಿಗೆ ಎಷ್ಟು ಜನ ಬಂಧುಗಳ ಕಳೆದುಕೊಂಡೆ. ಅವಳ ಆತ್ಮ ನೋವಿಲ್ಲದೆ ಶಿವನ ಪಾದ ಸೇರಲಿ ಎಂದು ಸಾಕು ತಾಯಿಯೊಂದಿಗಿದ್ದ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದರು.