ಬದುಕಿನ ಅನಿವಾರ್ಯತೆಗಳು ಅದೆತ್ತೆತ್ತ ಅಲೆಸಿದರೂ ಕಲಾಸಕ್ತಿ ಎಂಬುದು ಯಾವ ಮಾಯಕದಲ್ಲಾದರೂ ತನ್ನ ತಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಈ ಮಾತಿಗೆ ಉದಾಹರಣೆಯಂಥಾ ನೂರಾರು ಮಂದಿ ಚಿತ್ರರಂಗದಲ್ಲಿ ಸಿಗುತ್ತಾರೆ. ಅಂಥಾ ತೀವ್ರವಾದ ಸಿನಿಮಾಸಕ್ತಿಯೇ ಅಂಥವರನ್ನೆಲ್ಲ ನಟ ನಟಿಯರಾಗಿ, ಇತರೇ ವಿಭಾಗಗಳ ಪರಿಣಿತರನ್ನಾಗಿ, ಸಾಧಕರನ್ನಾಗಿ ನೆಲೆಗಾಣಿಸಿರುತ್ತದೆ. ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಹಾದಿಯಲ್ಲಿರುವವರು ಉದಯೋನ್ಮುಖ ನಟ ಹರೀಶ್ ಅರಸು.
ಹರೀಶ್ ಅವರದ್ದು ಬಹುಮುಖ ಪ್ರತಿಭೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಹರೀಶ್ ಬದುಕಿನ ಅನಿವಾರ್ಯತೆಗೆ ಬಿದ್ದು ನಾನಾ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಿನಿಮಾ ಪ್ರಮೋಶನ್ ಕಾರ್ಯದಲ್ಲಿ ಗುರುತಿಸಿಕೊಂಡಿರೋ ಹರೀಶ್ ಪಾಲಿಗೆ ಸಿನಿಮಾ ಎಂಬುದೇ ತನ್ನ ಐಡೆಂಟಿಟಿಯಾಗಬೇಕೆಂಬ ಆಳದ ಬಯಕೆಯಿದೆ. ಬಹುಶಃ ಅದಿಲ್ಲದೇ ಹೋಗಿದ್ದರೆ ನಟನೆಯ ಗುಂಗು ಹತ್ತಿಸಿಕೊಂಡು ಐಟಿ ಕ್ಷೇತ್ರದಿಂದ ಸಿನಿಮಾ ಕ್ಷೇತ್ರದತ್ತ ವಾಲಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲವೇನೋ…
Advertisement
Advertisement
ಇದುವರೆಗೂ ಹಲವಾರು ಕಿರುಚಿತ್ರಗಳಲ್ಲಿ ನಟಿಸಿ ಅನುಭವ ಹೊಂದಿರುವ ಹರೀಶ್ ಅರಸು ಪೂರ್ಣಪ್ರಮಾಣದಲ್ಲಿ ನಟನಾಗಿ ಗುರುತಿಸಿಕೊಂಡಿದ್ದು ‘ಕನ್ನಡ ದೇಶದೊಳ್’ ಎಂಬ ಸಿನಿಮಾ ಮೂಲಕ. ಅದರಲ್ಲಿ ಅಪ್ಪಟ ಕನ್ನಡಪ್ರೇಮಿ ಹುಡುಗನಾಗಿ ನಟಿಸಿದ್ದ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ನಟನಾಗಿ ಸಿನಿಮಾದಲ್ಲಿ ಅದು ಅವರ ಪಾಲಿಗೆ ಮೊದಲ ಅನುಭವ. ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳಿಂದ ಭರವಸೆ ತುಂಬಿಕೊಂಡಿರುವ ಅವರೀಗ ‘ಧೀರ ಸಾಮ್ರಾಟ್’ ಎಂಬ ಸಿನಿಮಾದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಇದರ ಜೊತೆಗೆ ಮತ್ತೊಂದು ಸಿನಿಮಾ ಅವಕಾಶವೂ ಅವರ ಕೈಲಿದೆ. ಅದರ ಬಗ್ಗೆ ಇಷ್ಟರಲ್ಲಿಯೇ ಮಾಹಿತಿಗಳು ಜಾಹೀರಾಗಲಿವೆ.
Advertisement
ಹೀಗೆ ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಲೇ ಸಿನಿಮಾ ರಂಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡಿರುವ ಹರೀಶ್ ಮೂಲತಃ ಕಡೂರಿನ ವಡೆಯರಳ್ಳಿಯವರು. ಮಧ್ಯಮ ವರ್ಗದ ರೈತಾಪಿ ಕುಟುಂಬದಿಂದ ಬಂದಿರುವ ಅವರಿಗೆ ಹಳ್ಳಿಯ ಸಹಜ ವಾತಾವರಣವೇ ಕಲೆಗಳ ಗುಂಗು ಹತ್ತುವಂತೆ ಮಾಡಿತ್ತು. ಆ ಕಾಲಕ್ಕೆ ಹರೀಶ್ ಅವರನ್ನು ಬಹುವಾಗಿ ಸೆಳೆದುಕೊಂಡಿದ್ದದ್ದು ನೃತ್ಯ. ಹಳ್ಳಿ ಕಾರ್ಯಕ್ರಮಗಳಲ್ಲಿ ಮೈಮರೆತು ಎಲ್ಲರೂ ಮೆಚ್ಚುವಂತೆ ನೃತ್ಯ ಮಾಡುತ್ತಿದ್ದ ಹರೀಶ್ ಆ ಕಾಲದಲ್ಲಿಯೇ ತಮ್ಮ ಹಳ್ಳಿಯಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದವರು.
Advertisement
ಇವರ ತಾತ ಗಂಗಯ್ಯ ಕಡೂರು ಸೀಮೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ ನಟನಾಗಿ ಪ್ರಸಿದ್ಧರಾಗಿದ್ದರಂತೆ. ಅವರು ಸುತ್ತಲ ಹತ್ತೂರುಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿರುವವರು. ಬಹುಶಃ ತಾತನ ಕಲಾಸಕ್ತಿಯ ಒಂದಂಶ ಹರೀಶ್ ಅವರೊಳಗೂ ಪ್ರವಹಿಸಿದ್ದರಿಂದಲೇ ಅವರೊಳಗೆ ಕಲಾಸಕ್ತಿ ಹುಟ್ಟಿಕೊಂಡಿದ್ದರೂ ಅಚ್ಚರಿಯೇನಿಲ್ಲ. ಶಾಲಾ ಕಾಲೇಜು ಹಂತದಲ್ಲಿ ಸಿನಿಮಾಸಕ್ತಿ ಇದ್ದರೂ ಆ ಕ್ಷಣದಲ್ಲಿ ಹರೀಶ್ ಅವರಿಗೆ ಬದುಕು ಕಟ್ಟಿಕೊಳ್ಳುವುದೇ ಮುಖ್ಯವಾಗಿತ್ತು. ಇದರಿಂದಾಗಿಯೇ ಸಾಫ್ಟ್‍ವೇರ್ ವಲಯದಲ್ಲಿ ಟ್ರಾನ್ಸ್‍ಪೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದ್ದರು.
ಆ ನಂತರದಲ್ಲಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಫೇಸ್‍ಬುಕ್‍ನಲ್ಲಿ ವಾರಕ್ಕೊಂದರಂತೆ ಪ್ರಸಾರವಾಗುತ್ತಿದ್ದ ಸೀರೀಸ್‍ನಲ್ಲಿ ನಟಿಸಲಾರಂಭಿಸಿದ್ದರು. ಆ ನಂತರ ಒಂದಷ್ಟು ಕಿರುಚಿತ್ರಗಳಲ್ಲಿಯೂ ಹರೀಶ್ ನಟಿಸಿದ್ದರು. ಹೀಗೆ ಹಂತ ಹಂತವಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸಾಗಿ ಬಂದ ಹರೀಶ್ ಇದೀಗ ನಟನಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ನಟನಾಗಿಯೇ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹೊಂದಿದ್ದಾರೆ. ಯಾವ ಪಾತ್ರವಾದರೂ ಮಾಡುವ ಛಾತಿ ಹೊಂದಿರೋ ಹರೀಶ್ ಅರಸು ಮತ್ತೊಂದಷ್ಟು ಅವಕಾಶ ಗಿಟ್ಟಿಸಿಕೊಂಡು ನಟನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೇ ದಟ್ಟವಾಗಿವೆ.