ಯಾವ ಪಾತ್ರವೇ ಸಿಕ್ಕರೂ ಅದರ ಆಳಕ್ಕಿಳಿದು, ಪಾತ್ರವೇ ತಾನಾಗಿ ಬಿಡುವ ತನ್ಮಯತೆ ಹೊಂದಿರೋ ಅಪರೂಪದ ನಟನರ ಸಾಲಿನಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ವಿಶೇಷ ಸ್ಥಾನವಿದೆ. ಸದಾ ಹೊಸತನದ ಪಾತ್ರಗಳಿಗಾಗಿ ಹಂಬಲಿಸುವ ಅವರನ್ನು ಅಪರೂಪದ ಪಾತ್ರಗಳೇ ಅರಸಿ ಬರುತ್ತಿವೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ‘ಕೆರೆಬೇಟೆ’ (Kerebete) ಚಿತ್ರದಲ್ಲಿಯೂ ಗೋಪಾಲ ದೇಶಪಾಂಡೆಗೆ (Gopal Deshpande) ಒಂದೊಳ್ಳೆ ಪಾತ್ರವೇ ಸಿಕ್ಕಿದೆ. ಮಲೆನಾಡು ವಾತಾವರಣವನ್ನು ಅತೀವವಾಗಿ ಇಷ್ಟಪಡುವ, ಆ ವಾತಾವರಣದ ಬಗೆಗೊಂದು ಮೋಹ ಬೆಳೆಸಿಕೊಂಡಿರುವ ಅವರಿಗೆ ಆ ಭಾಗದ ಕಥೆಯಲ್ಲಿ ಪಾತ್ರವಾಗುವ ಅವಕಾಶ ಸಿಕ್ಕಿರೋದರಿಂದ ಥ್ರಿಲ್ ಆಗಿದ್ದಾರೆ.


ಇದೆಲ್ಲದರೊಂದಿಗೆ ‘ಕೆರೆಬೇಟೆ’ ಎಲ್ಲರಿಗೂ ಹಿಡಿಸುತ್ತೆ, ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸುತ್ತದೆ ಎಂಬ ಗಾಢ ನಂಬಿಕೆಯೂ ಅವರಲ್ಲಿದೆ. ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ‘ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.


