ಹೆಸರಾಂತ ಲೇಖಕ, ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ (Rangaswamy Mookanahalli) ಸಿನಿಮಾ ರಂಗದ ಬಗ್ಗೆ ಬರೆಯೋದು ಅಪರೂಪ. ಈ ನಡುವೆ ಕನ್ನಡದ ಕುಳ್ಳ ದ್ವಾರಕೀಶ್ (Dwarakish)ಅವರ ಕುರಿತು ಮೂಕನಹಳ್ಳಿ ಅವರು ಹೊಸ ನೋಟವನ್ನು ತೆರೆದಿಟ್ಟಿದ್ದಾರೆ. ಅವರ ಲೇಖನ ಇಲ್ಲಿದೆ.
Advertisement
ದ್ವಾರಕೀಶ್ ಅವರ ಹೆಸರು ಪ್ರಥಮವಾಗಿ ಕೇಳಿದಾಗ ನನಗೆ ಆರು ವರ್ಷ ವಯಸ್ಸು. ಅಣ್ಣನಿಗೂ ದ್ವಾರಕೀಶ್ ಎಂದರೆ ಇಷ್ಟ. ಅಣ್ಣ (ಅಪ್ಪ) ಹೇಳಿಕೇಳಿ ಸಿನಿಮಾಪ್ರಿಯ. ವರ್ಷದಲ್ಲಿ ರಿಲೀಸ್ ಆಗುತ್ತಿದ್ದ ಎಲ್ಲಾ ಸಿನಿಮಾ ನೋಡುತ್ತಿದ್ದ ಮತ್ತು ಅದನ್ನು ರಾಜಾರೋಷವಾಗಿ ಹೇಳಿಕೊಂಡು ತಿರುಗುತ್ತಿದ್ದ ಭೂಪ ನಮ್ಮಪ್ಪ. ಅಣ್ಣ ಗುರು ಶಿಷ್ಯರು ಸಿನಿಮಾ ನೋಡಿದ್ದಾರೆ. ಅದನ್ನು ಹೆಂಡತಿ ಮಕ್ಕಳಿಗೆ ತೋರಿಸಬೇಕು ಎಂದು ಅವರಿಗೆ ಅನ್ನಿಸಿದೆ. ಹೀಗಾಗಿ ನನಗೆ ಅರೆಬರೆ ನೆನಪಿರುವಂತೆ ಅಣ್ಣನ ಜೊತೆಗೆ ನೋಡಿದ ಮೊದಲ ಸಿನೆಮಾವದು. ಆ ನಂತರ ಅಣ್ಣನ ಜೊತೆ ಐದಾರು ಸಿನಿಮಾ ನೋಡಿರಬಹುದು.
Advertisement
Advertisement
ಗುರುಶಿಷ್ಯರು ಚಿತ್ರದಲ್ಲಿ ನನಗೆ ನೆನಪಿರುವುದು ದ್ವಾರಕೀಶ್ , ರತ್ನಾಕರ್ , ಉಮೇಶ್ , ಮುಸರಿ ,ಶಿವರಾಂ ಅವರು. ಉಳಿದ ಮುಖಗಳು ನೆನಪಿಲ್ಲ. ಇವತ್ತಿಗೆ ಕಥೆಯೂ ನೆನಪಿಲ್ಲ. ಅಂದಿಗೆ ಬಹಳಷ್ಟು ನಕ್ಕ ನೆನಪು. ಇಡೀ ಚಿತ್ರ ಮಂದಿರವೇ ನಗುತ್ತಿದ್ದ ಮಸುಕು ನೆನಪು. ಅದಾದ ಮೇಲೆ ದ್ವಾರಕೀಶ್ ಚಿತ್ರಗಳನ್ನು ನೋಡಿದ್ದೇನೆ. ರವಿಚಂದ್ರನ್ ನಾಯಕನಾಗಿ ನಟಿಸಿದ ದ್ವಾರಕೀಶ್ ನಿರ್ದೇಶನ ಮಾಡಿದ್ದ ಚಿತ್ರವನ್ನು ೫ ನಿಮಿಷ ನೋಡಿ ಬೇಸರಿಸಿಕೊಂಡು ಹೊರಬಂದಿದ್ದೆ. ದ್ವಾರಕೀಶ್ ಅವರನ್ನು ಇಷ್ಟಪಡದಿರಲು ಕಾರಣಗಳು ಇರಲಿಲ್ಲ. ಕರ್ನಾಟಕ ಮ್ಯಾಪ್ನಲ್ಲಿ ಪೂರ್ಣವಾಗಿ ಆತನ ಮುಖ ಬರುತ್ತಿತ್ತು ಅಲ್ಲಿ ಆತ ವಿಚಿತ್ರವಾಗಿ ನಗುತ್ತಿದ್ದ. ಅಂದಿಗೆ ಅದು ಜೋಕ್ , ಇಂದು ಕುಳಿತು ವಿಶ್ಲೇಷಿಸಿದಾಗ ಆತ ಒಂದು ಬ್ರಾಂಡ್. ಹೌದಲ್ಲ ನೀವೇ ಯೋಚನೆ ಮಾಡಿನೋಡಿ ಆತನಿಗೆ ಲುಕ್ಸ್ ಇರಲಿಲ್ಲ , ಹೈಟ್ ಇರಲಿಲ್ಲ , ಚಾರ್ಮ್ ಇರಲಿಲ್ಲ ಎಲ್ಲವೂ ತನ್ನ ವಿರುದ್ಧ ಇದ್ದಾಗ ತನ್ನಲ್ಲಿದ್ದ ಐಬನ್ನೇ ಆತ ಬ್ರಾಂಡ್ ಮಾಡಿಕೊಂಡ ಶೂರ , ಬುದ್ದಿವಂತ , ಮೇಧಾವಿ . ಹೌದು ಕಣ್ರೀ , ನಾನು ಕುಳ್ಳ , ಬರಿ ಕುಳ್ಳನಲ್ಲ , ಕರ್ನಾಟಕದ ಕುಳ್ಳ ಎನ್ನುವ ದಾಷ್ಟಿಕತೆ ಆತನನ್ನು ಗೆಲ್ಲಿಸಿದ ಅಂಶ ಎಂದು ನನ್ನ ಭಾವನೆ.
Advertisement
ಹಣ , ಯಶಸ್ಸು ಸದಾ ಜೊತೆಯಲ್ಲಿ ಇರುವುದಿಲ್ಲ ಅವುಗಳು ಬಂದಾಗ ಒಂದಷ್ಟು ಬದುಕಿಕಾಗುವಷ್ಟು ಪೇರಿಸಿ ಇಟ್ಟು ಕೊಂಡು ಬಿಡಬೇಕು ಎನ್ನುವುದು ಸರ್ವೇಸಾಮಾನ್ಯವಾಗಿ ಎಲ್ಲರೂ ಮಾಡುವ ಕೆಲಸ. ಆದರೆ ದ್ವಾರಕೀಶ್ ಎನ್ನುವ ಮಹಾನ್ ಕನಸುಗಾರ , ಧೈರ್ಯಶಾಲಿ ದಾರಿಯೇ ಬೇರೆ. ಆತ ಬಂದದ್ದೆಲ್ಲಾ ಸಿನೆಮಾಗೆ ಸುರಿಯುವ ತಾಕತ್ತು ಹೊಂದಿದ್ದ ವ್ಯಕ್ತಿ. ಆತನೇ ಒಂದು ಕಡೆ ಹೇಳಿಕೊಂಡಿದ್ದಾರೆ ವರ್ಷದ ಕೊನೆಯ ದಿನ ದಕ್ಷಿಣ ಭಾರತದ ಮಹಾನ್ ನಟರೆಲ್ಲಾ , ರಜನಿಕಾಂತ್ ಸೇರಿ ನನ್ನ ಮನೆಯಲ್ಲಿ ಇರುತ್ತಿದ್ದರು. ಪಾಪರ್ ಆಗಿದ್ದ ವರ್ಷದ ಕೊನೆಯ ದಿನ ಮನೆಯಲ್ಲಿ ಒಬ್ಬನೇ ಇದ್ದೆ ಎಂದು. ಹಿಟ್ ಆಗಿದ್ದ ಸಮಯದಲ್ಲಿ ಹೊಸ ಸಿನಿಮಾ ಮಾಡುವುದಕ್ಕೆ ಮುಂಚೆ ದ್ವಾರಕೀಶ್ ಸಿನಿಮಾ ಮಾಡುತ್ತಾನೆ ಎಂದರೆ ಲೇವಾದೇವಿಗಾರರು ಬಂಡವಾಳ ಹೂಡಲು ಥೈಲಿ ಹಿಡಿದು ಬರುತ್ತಿದ್ದರು. ನಾಲ್ಕು ಸಿನಿಮಾ ಸೋತು , ಮನೆ ಮಠ ಎಲ್ಲವೂ ಹೋಗಿ ಕೈ ಬರಿದಾದಾಗ ಕೇಳಿದರೂ ನಯಾಪೈಸೆ ಹುಟ್ಟುತ್ತಿರಲಿಲ್ಲ ಎನ್ನುತ್ತಾರೆ. ಇದೆ ಬದುಕು. ಆದರೆ ಈ ಬದುಕನ್ನು ದ್ವಾರಕೀಶ್ ಅರ್ಥ ಮಾಡಿಕೊಳ್ಳಲು ಹೋಗಲಿಲ್ಲ. ತನ್ನ ರೀತಿನೀತಿಗಳಲ್ಲಿ ಬದುಕಿದ್ದರು. ಕನ್ನಡ ಚಿತ್ರಗಳನ್ನು ವಿದೇಶದಲ್ಲಿ ಚಿತ್ರೀಕರಿಸುವ ಗೀಳು ಹಚ್ಚಿಸಿದ ಮಹಾನುಭಾವ ಕೂಡ ಇವರೇ. ಅಂದಿನ ದಿನದಲ್ಲಿ ಸಿಂಗಾಪುರದಲ್ಲಿ ರಾಜಾಕುಳ್ಳ , ಆಫ್ರಿಕಾದಲ್ಲಿ ಶೀಲಾ ಚಿತ್ರಗಳನ್ನು ಬಾಯಿಬಿಟ್ಟು ನೋಡಿದ ನೆನಪು ಇನ್ನೂ ಹಸಿರಾಗಿದೆ. ವಿಷ್ಣುವರ್ಧನ್ ಅವರೊಂದಿಗಿನ ಲವ್ ಹೇಟ್ ರಿಲೇಷನ್ಶಿಪ್ ಬಗ್ಗೆ ಇರುವಷ್ಟು ಗಾಸಿಪ್ ಆ ಸಮಯದಲ್ಲಿ ಬೇರೆ ಇರಲಿಲ್ಲ ಅನ್ನಿಸುತ್ತದೆ. ಇನ್ನೇನು ದ್ವಾರಕೀಶ್ ಕಥೆ ಮುಗಿಯಿತು , ಹಣಕಾಸು ವಿಷಯದಲ್ಲಿ ಪೂರ್ಣ ನೆಲಕಚ್ಚಿದ್ದಾರೆ ಎಂದಾಗ ಮತ್ತೆ ಕೈ ಹಿಡಿದದ್ದು ಅದೇ ವಿಷ್ಣು. ಆಪ್ತಮಿತ್ರ , ಆಪ್ತರಕ್ಷಕ ಚಿತ್ರಗಳು ಅವರ ಕೊನೆಗಾಲದಲ್ಲಿ ಒಂದಷ್ಟು ನೆಮ್ಮದಿಯಾಗಿ ಬದುಕುವ ಅವಕಾಶವನ್ನು ಮಾಡಿಕೊಟ್ಟಿದ್ದವು.
ಕನ್ನಡದಲ್ಲಿ ಈತ ಮಾಡಿದಷ್ಟು ಸಾಹಸ -ಸಾಧನೆ ಬೇರಾರೂ ಮಾಡಿಲ್ಲ ಎಂದು ನನ್ನ ನಂಬಿಕೆ. ಈ ಮಾತು ಹೇಳಲು ಕಾರಣ ಆತ ಹೀರೋ ಆಗಿರಲಿಲ್ಲ ಆದರೆ ಯಾವ ಹೀರೋಗೂ ಕಡಿಮೆ ಇಲ್ಲದಂತೆ ಬಾಳಿ ಬದುಕಿ ಹೋದರು. ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ . ಅದಕ್ಕೆ ಬೇಕಾಗಿರುವುದು ಹಣಕ್ಕಿಂತ ಹೆಚ್ಚಾಗಿ ಆತ್ಮಬಲ. ಇದೆಲ್ಲಕ್ಕೂ ಮಿಗಿಲಾಗಿ ಆತನ ಇನ್ನೊಂದು ದೊಡ್ಡ ಸಾಧನೆ ಜನರನ್ನು ನಗಿಸಿದ್ದು. ಏನು ಬೇಕಾದರೂ ಮಾಡಬಹದು ಜನರನ್ನು ನಗಿಸುವುದು ಸುಲಭವಲ್ಲ. ಕೀಳು ಅಭಿರುಚಿಯಿಲ್ಲದೆ , ಸಹಕಲಾವಿದರ ಕೆನ್ನೆಗೆ ಬಾರಿಸಿ ನಗಿಸಲಿಲ್ಲ , ಟೈಮಿಂಗ್ , ಭಾಷೆ , ತನ್ನನ್ನು ತಾನೇ ಪೆದ್ದನಾಗಿ ತೋರಿಸಿಕೊಂಡು ಆತ ಗೆದ್ದಿದ್ದರು, ನಮ್ಮನ್ನು ನಗಿಸಿದ್ದರು.
ಹುಟ್ಟಿದವರೆಲ್ಲಾ ಸಾಯಲೇ ಬೇಕು ಒಂದು ದಿನ , ಇವತ್ತು ದ್ವಾರಕೀಶ್ ದಿನ ಅಷ್ಟೇ . ಸತ್ತಮೇಲೂ ಸದಾ ಜೀವಂತವಾಗಿರುವ ಮಹಾನ್ ಕಲಾವಿದರ ಸಾಲಿನಲ್ಲಿ ನೀವು ನಿಲ್ಲುತ್ತೀರಿ ಮಿಸ್ಟರ್ ಕರ್ನಾಟಕದ ಕುಳ್ಳ.