ನಿನ್ನೆಯಷ್ಟೇ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಮತ್ತು ಕನ್ನಡ ಚಿತ್ರೋದ್ಯಮ ತಮ್ಮದೇ ಆದ ರೀತಿಯಲ್ಲಿ ಆಚರಿಸಿವೆ. ರಾಜ್ಯಾದ್ಯಂತ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಿದ್ದಾರೆ. ಅಲ್ಲದೇ, ಅನೇಕ ಕಲಾವಿದರು ಮತ್ತು ತಂತ್ರಜ್ಞರು ತಮ್ಮದೇ ಆದ ರೀತಿಯಲ್ಲಿ ಅಪ್ಪುವನ್ನು (Appu) ಸ್ಮರಿಸಿದ್ದಾರೆ. ಅದರಲ್ಲಿ ವಿಭಿನ್ನವಾಗಿ ಗಮನ ಸೆಳೆದದ್ದು ನಟ ದುನಿಯಾ ವಿಜಯ್ (Duniya Vijay) ಅವರ ಟ್ವೀಟ್.
ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿರುವ ಅವರು, ಅಪ್ಪುಗಾಗಿ ವಿಶೇಷ ಬೇಡಿಕೆಯನ್ನು ಇಟ್ಟಿದ್ದಾರೆ. ಇನ್ಮುಂದೆ ಪಠ್ಯಪುಸ್ತಕದಲ್ಲಿ ‘ಅ’ ಅಂದರೆ ‘ಅಪ್ಪು’ ಎಂದು ಓದಿಸುವಂತಾಗಲಿ ಎಂದಿದ್ದಾರೆ. ‘ಅ’ ಅಕ್ಷರವನ್ನು ಕಲಿಸುವಾಗ ‘ಅಪ್ಪು’ ಎಂದು ನಮೂದಿಸುವಂತೆ ಅವರು ಕೇಳಿಕೊಂಡಿದ್ದಾರೆ. ಈ ಮೂಲಕ ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ
ದುನಿಯಾ ವಿಜಯ್ ಈ ರೀತಿಯಲ್ಲಿ ಟ್ವೀಟ್ ಮಾಡುತ್ತಿದ್ದಂತೆಯೇ ಅಸಂಖ್ಯಾತ ಅಭಿಮಾನಿಗಳು ಮೆಚ್ಚಿಗೆ ಸೂಚಿಸಿದ್ದಾರೆ. ಕೆಲವರು ಪ್ರಾಥಮಿಕ ಪಠ್ಯದಲ್ಲಿ ಅಪ್ಪು ಅವರ ಜೀವನ ಕುರಿತು ಪ್ರಕಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೇವಲ ಒಂದು ವಿಶ್ವವಿದ್ಯಾಲಯಕ್ಕೆ ಅವರ ಬದುಕನ್ನು ಸೀಮಿತ ಮಾಡದೇ, ಎಲ್ಲ ಪಠ್ಯದಲ್ಲೂ ಅವರ ಜೀವನ ಸಂದೇಶ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಅಪ್ಪು ಜನ್ಮದಿನದಂದು ನಿನ್ನೆ ದಿನಪೂರ್ತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಪ್ಪು ಸ್ಮಾರಕದ ಹತ್ತಿರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಅಸಂಖ್ಯಾತ ಅಭಿಮಾನಿಗಳು ದೂರದ ಊರಿಂದ ಸ್ಮಾರಕ ಪೂಜೆಗೆ ಆಗಮಿಸಿದ್ದರು.