ಸರ್ಕಾರಿ ಆಯೋಗದಲ್ಲಿ ಉನ್ನತ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿ ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಅವರ ತಂದೆ, ನಿವೃತ್ತ ಡೆಪ್ಯೂಟಿ ಎಸ್‌ಪಿ ಕೂಡ ಆಗಿರುವ ಜಗದೀಶ್ ಸಿಂಗ್ ಪಟಾನಿಗೆ 25 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶುಕ್ರವಾರ ಸಂಜೆ ಬರೇಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವೇಂದ್ರ ಪ್ರತಾಪ್ ಸಿಂಗ್, ದಿವಾಕರ್ ಗಾರ್ಗ್, ಜುನಾ ಅಖಾರಾದ ಆಚಾರ್ಯ ಜಯಪ್ರಕಾಶ್, ಪ್ರೀತಿ ಗಾರ್ಗ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ವಂಚನೆ, ಕ್ರಿಮಿನಲ್ ಬೆದರಿಕೆ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಡಿ ಕೆ ಶರ್ಮಾ ತಿಳಿಸಿದ್ದಾರೆ.
ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿ ಜಗದೀಶ್ ಪಟಾನಿ ಎಂಬವರು, ತನಗೆ ವೈಯಕ್ತಿಕವಾಗಿ ಪರಿಚಯವಿರುವ ಶಿವೇಂದ್ರ ಪ್ರತಾಪ್ ಸಿಂಗ್, ದಿವಾಕರ್ ಗರ್ಗ್ ಮತ್ತು ಆಚಾರ್ಯ ಜಯಪ್ರಕಾಶ್ ಅವರಿಗೆ ಪರಿಚಯಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆ. ನಿಮಗೆ ಪಕ್ಷದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅಥವಾ ಸರ್ಕಾರಿ ಆಯೋಗದಲ್ಲಿ ಅಂತುಹುದೇ ಪ್ರತಿಷ್ಠಿತ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಟಾನಿ ಅವರ ವಿಶ್ವಾಸ ಗಳಿಸಿದ ಬಳಿಕ ಅವರಿಂದ ವಂಚಕರು 25 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. 5 ಲಕ್ಷ ನಗದು ಹಾಗೂ 20 ಲಕ್ಷ ಹಣವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಒಂದು ವೇಳೆ, ಮೂರು ತಿಂಗಳೊಳಗೆ ನಿಮಗೆ ಸೂಕ್ತ ಸ್ಥಾನಮಾನ ಕೊಡಿಸಲು ಸಾಧ್ಯವಾಗದಿದ್ದರೆ ಹಣ ವಾಪಸ್ ನೀಡುವುದಾಗಿ ವಂಚಕರು ತಿಳಿಸಿದ್ದರು.
ಮೂರು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಾಣದಿದ್ದಾಗ ಪಟಾನಿ ಹಣ ವಾಪಸ್ ಕೇಳಿದ್ದಾರೆ. ಆಗ ವಂಚಕರು ಬೆದರಿಕೆ ಒಡ್ಡಿದ್ದರು. ತನಗೆ ವಂಚನೆಯಾಗಿದೆ ಎಂದು ಪಟಾನಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.