ಬೆಂಗಳೂರು ನಗರ ಸೇರಿದಂತೆ ಕೆಲವೊಂದು ಸಿಟಿಗಳಲ್ಲಿ ಸ್ವಚ್ಚತೆ ಅನ್ನೋದು ಮರಿಚಿಕೆಯಾಗಿದೆ. ಅದರಲ್ಲೂ ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸ್ವಚ್ಛತೆ ಕಾಪಾಡಿ ಅಂತ ದೊಡ್ಡದಾಗಿ ಬರೆದ್ರೂ ಓದಿದವರಿಗೂ ಅದು ಕಾಣಿಸಲ್ಲ. ಕಾಪಾಡಬೇಕಾದವರೇ ಗಲೀಜು ಮಾಡಿ, ವಾತಾವರಣವನ್ನು ಕಲುಷಿತಗೊಳಿಸಿಬಿಡ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸೋದು ತುಂಬಾ ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಶರತ್.
ಎಸ್, ಕಥೆ ಚಿತ್ರಕಥೆ ಬರೆದು ತಾವೇ ನಿರ್ದೇಶನ ಮಾಡಿ ನಟನೆಯಲ್ಲೂ ಮೊದಲ ಪ್ರಯೋಗದಲ್ಲೇ ಸೈ ಎನಿಸಿಕೊಂಡಿದ್ದಾರೆ ಶರತ್. G-Studios Media ಯೂಟ್ಯೂಬ್ ಚಾನೆಲ್ ನಲ್ಲಿ ‘ವೇಷ’ ಕಿರುಚಿತ್ರ ಇಂದು ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಸಖತ್ ವ್ಯೂವ್ ಪಡೆದಿದೆ.
ಈ ಕಿರುಚಿತ್ರದಲ್ಲಿರುವ ವಿಷಯ ತುಂಬಾ ಸಿಂಪಲ್. ನಮ್ಮ ಸುತ್ತಮುತ್ತಲಿನಲ್ಲಿರುವ ಸಮಸ್ಯೆಯನ್ನೇ ಕಥೆಯನ್ನಾಗಿ ಎಣೆದಿದ್ದಾರೆ. ನೋಡಿದವರಿಗೆ ವಾವ್ ಈ ಸಮಸ್ಯೆಯನ್ನ ಈ ರೀತಿಯೂ ಸಾಲ್ವ್ ಮಾಡಬಹುದಾ ಎಂಬ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಭಿಕ್ಷೆಗೆ ಮತ್ತೊಂದಕ್ಕೆ ಮಾತ್ರ ಸೀಮಿತರಾಗಿರುವ, ಸಮಾಜದಲ್ಲಿ ಎಲ್ಲರಿಂದ ದೂರ ನಿಂತಿರುವ ಮಂಗಳ ಮುಖಿಯರಿಂದ ಇಂಥ ಕೆಲಸವೂ ಸಾಧ್ಯ ಎಂಬುದನ್ನು ಈ ಕಿರು ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಹಾಕುವ ಒಂದೇ ಶಾಪಕ್ಕೆ ಹೆದರಿ ಹಣ ಕೊಡುವವರು ಅವರ ಮಾತಿಗೆ ಹೇಗೆ ಸ್ವಚ್ಛತೆಗೆ ಇಳಿಯುತ್ತಾರೆ ಎಂಬುದನ್ನು ಶರತ್ ಪ್ರೂವ್ ಮಾಡಿದ್ದಾರೆ. ಆ ಅದ್ಭುತ ನಿರೂಪಣೆಯನ್ನ ಕಿರುಚಿತ್ರದಲ್ಲೇ ನೋಡಿದರೆ ಖುಷಿ ಕೊಡುತ್ತೆ.
ನಟನಾಗಿ ಅನುಭವ ಇರುವ ಶರತ್, ಕಿರುಚಿತ್ರದ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ್ದಾರೆ. ಮೊದಲ ಕಿರುಚಿತ್ರದಲ್ಲೇ ಒಬ್ಬ ಒಳ್ಳೆ ಡೈರೆಕ್ಟರ್ ಸಾಮಾಥ್ರ್ಯವಿರುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲ್ಲ. ಸಮಾಜದಲ್ಲಿ ಇರುವ ಕೆಲವೊಂದು ಸಮಸ್ಯೆಗಳನ್ನು ಇಟ್ಟುಕೊಂಡು ಜನರಿಗೆ ಇಷ್ಟವಾಗುವ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. 10 ನಿಮಿಷ 40 ಸೆಕೆಂಡ್ ಈ ಕಿರುಚಿತ್ರ ಇದೆ. ಶರತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗೋಪಿ ಸ್ನೇಹಿತ ಪಾತ್ರದಲ್ಲಿ ಅಭಿನಯಿಸಿದ್ದು, ಸರಳ ಸೇರಿದಂತೆ ಅನೇಕ ಮಂಗಳಮುಖಿಯರು ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿರುವಂತೆ ಕ್ವಾಲಿಟಿ ಇದ್ದು ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ ಅಂತಾರೆ ನಿರ್ದೇಶಕ ಕಂ ನಟ ಶರತ್.
ಒಟ್ಟಾರೆ ಸಮಸಾಜಕ್ಕೆ ಬೇಕಾದ ಒಂದೊಳ್ಳೆ ಮೆಸೇಜ್ ಈ ಕಿರುಚಿತ್ರದಲ್ಲಿದ್ದು, ಆ ಸಣ್ಣ ತಪ್ಪನ್ನ ಮಾಡುವಾಗ ಮನದ ಮೂಲೆಯಲ್ಲಿ ಅರಿವು ಮೂಡಿಸುವಂತ ಕೆಲಸ ಮಾಡುತ್ತೆ ‘ವೇಷ’ ಸಿನಿಮಾ. ಜೊತೆಗೆ ಕೊನೆಯಲ್ಲಿ ಬರುವ ದೇಶಕ್ಕಾಗಿ ಯಾವ ‘ವೇಷ’ ಬೇಕಾದ್ರೂ ಹಾಕ್ತಿನೋ ಅನ್ನೋ ಮಾತು ಎಲ್ಲರನ್ನು ಎಚ್ಚರಗೊಳಿಸುವಂತೆ ಮಾಡಿದೆ.