ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಸಿನಿಮಾ ಅಪ್‍ಡೇಟ್ಸ್ ಗಳ ಜೊತೆಗೆ ಸಮಾಜದಲ್ಲಿನ ಇತರೆ ಘಟನೆಗಳ ಕುರಿತು ಸಹ ಆಗಾಗ ಧ್ವನಿ ಎತ್ತುತ್ತಲೇ ಇರುತ್ತಾರೆ. ಅಲ್ಲದೆ ಅವರು ಕವನಗಳನ್ನು ಚೆನ್ನಾಗಿ ಬರೆಯುತ್ತಾರೆ ಎನ್ನುವುದಕ್ಕೆ ಸಂದರ್ಶನಗಳಲ್ಲಿ ಆಗಾಗ ಕವನಗಳನ್ನು ಹೇಳುವುದೇ ಸಾಕ್ಷಿ. ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ದೆಹಲಿ ದಳ್ಳುರಿ ಕುರಿತು ತಮ್ಮ ನಾಲ್ಕು ಸಾಲಿನ ಕವನದ ಮೂಲಕವೇ ಅಭಿಪ್ರಾಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಟ ಧನಂಜಯ್, ಎಲ್ಲಿಯೂ ದೆಹಲಿ ಹಿಂಸಾಚಾರ ಎಂದು ನಮೂದಿಸದೆ, ಕವನದ ರೂಪದಲ್ಲಿ ಬರೆದುಕೊಂಡಿದ್ದಾರೆ. `ಸೂರ್ಯಕಾಂತಿಯ ನೋಡಿ ಕಲಿಯಿರಿ ಎಂದೆ ಧರ್ಮದತ್ತ ವಾಲಿದರು!. ಹೊಳೆಯ ನಿಶ್ಶಬ್ದತೆಯೆಡೆಗೆ ನಡೆಯಿರಿ ಎಂದೆ ಗುಂಡಿನ ಶಬ್ದಕ್ಕೆ ಮಾರುಹೋದರು!. ಸೂರ್ಯ ಮುಳುಗುತ್ತಿದ್ದಾನೆ!. ಹೊಳೆ ಹೆಪ್ಪುಗಟ್ಟುತ್ತಿದೆ!’ ಎಂದು ಅರ್ಥಗರ್ಭಿತ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಸೂರ್ಯಕಾಂತಿಯ ನೋಡಿ ಕಲಿಯಿರಿ ಎಂದೆ
ಧರ್ಮದತ್ತ ವಾಲಿದರು!
ಹೊಳೆಯ ನಿಶ್ಯಬ್ಧತೆಯೆಡೆಗೆ ನಡೆಯಿರಿ ಎಂದೆ
ಗುಂಡಿನ ಶಬ್ಧಕ್ಕೆ ಮಾರುಹೋದರು!
ಸೂರ್ಯ ಮುಳುಗುತ್ತಿದ್ದಾನೆ!
ಹೊಳೆ ಹೆಪ್ಪುಗಟ್ಟುತ್ತಿದೆ!
— Gurudev Hoysala (@Dhananjayaka) February 26, 2020
- Advertisement
ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಗಳ ಕುರಿತು ಹಲವು ಪ್ರತಿಭಟನೆಗಳು ನಡೆದಿವೆ. ಇದರ ಭಾಗವಾಗಿ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸುಮಾರು 22ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೆ 200ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶಕ್ಕೆ ಆಗಮಿಸಿದ ವೇಳೆಯೇ ಈ ಹಿಂಸಾಚಾರ ನಡೆದಿದ್ದು, ಕಳೆದ ಮೂರು ದಿನಗಳ ಹಿಂದೆಯೇ ಶುರುವಾದ ಈ ಘರ್ಷಣೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
- Advertisement
ಈ ಕುರಿತು ಪ್ರಧಾನಿ ಮೋದಿ ಸಹ ಬೇಸರ ವ್ಯಕ್ತಪಡಿಸಿ ಶಾಂತತೆ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಹಲವು ಗಣ್ಯರು, ಸಿನಿಮಾ ತಾರೆಯರು, ಖ್ಯಾತ ಸೆಲೆಬ್ರಿಟಿಗಳು ಸಾಮಾಜಿಕ ತಾಣಗಳಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶ ಹೊರಡಿಸಿದೆ. ಇಷ್ಟಾದರೂ ಹಿಂಸಾಚಾರದ ಪ್ರಮಾಣ ಕಡಿಮೆ ಆಗಿಲ್ಲ.
ನಟ ಧನಂಜಯ್ ಅಭಿನಯದ ಪಾಪ್‍ಕಾರ್ನ್ ಮಂಕಿ ಟೈಗರ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಡಾಲಿ ಧನಂಜಯ್‍ಗೆ ಮೂವರು ನಾಯಕಿರಿದ್ದಾರೆ. ನಟಿ ನಿವೇದಿತಾ, ಅಮೃತಾ ಅಯ್ಯಂಗಾರ್, ಮೋನಿಶಾ ನಾಡಿಗೇರ್ ನಾಯಕಿ ಪಾತ್ರದಲ್ಲಿ ಮಿಂಚಿದ್ದು, ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.