ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ನಟ ದರ್ಶನ್ (Darshan) ಬಳಿಯಿರುವ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.
ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರೊದು ಎಲ್ಲಿಯೂ ಕಂಡುಬರದ ಕಾರಣ ತಾತ್ಕಾಲಿಕವಾಗಿ ಅಂದರೆ ಕೇಸ್ ಮುಗಿಯುವತನಕ ಅಮಾನತ್ತಿನಲ್ಲಿಡಲು ಪೊಲೀಸರು ನಿರ್ಧರಿಸಿದ್ದಾರೆ.
Advertisement
Advertisement
ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಲು ಈಗಾಗಲೇ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್‍ನಲ್ಲಿ, ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರೋದ್ರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‍ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.
Advertisement
Advertisement
ಪೊಲೀಸರ ನೋಟಿಸ್‍ಗೆ ಉತ್ತರಿಸಿದ್ದ ದರ್ಶನ್, ನಾನು ಸೆಲೆಬ್ರಿಟಿ ಆಗಿರುವುದರಿಂದ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ. ನನ್ನ ಮೇಲಿರೋ ಕೇಸ್‍ನ ಸಮಯದಲ್ಲಿ ಆ ಗನ್ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಗನ್ ದುರ್ಬಳಕೆ ಮಾಡಿಕೊಳ್ಳಲ್ಲ. ಹಾಗಾಗಿ ಗನ್ ಲೈಸೆನ್ಸ್ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಗನ್ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ.