Connect with us

Cinema

ಚಾಮುಂಡಿ ತಾಯಿಯ ದರ್ಶನ ಪಡೆದ ನಟ ದರ್ಶನ್

Published

on

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢದ ಪ್ರಥಮ ಶುಕ್ರವಾರದ ಪೂಜೆ ಅದ್ಧೂರಿಯಾಗಿ ನಡೆಯುತ್ತಿದೆ. ಹೀಗಾಗಿ ನಟ ದರ್ಶನ್ ಅವರು ಕೂಡ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಯ ದರ್ಶನ ಪಡೆದುಕೊಂಡಿದ್ದಾರೆ.

ನಟ ದರ್ಶನ್ ಆಪ್ತರು ಮತ್ತು ಅಭಿಮಾನಿಗಳೊಂದಿಗೆ ದೇವಸ್ಥಾನಕ್ಕೆ ಬಂದು ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದುಕೊಂಡಿದ್ದಾರೆ. ಜೊತೆಗೆ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಾಯಿ ದರ್ಶನ ಪಡೆದು ಮಾತನಾಡಿದ ನಟ ದರ್ಶನ್, ಪ್ರತಿವರ್ಷವೂ ತಾಯಿಯ ದರ್ಶನ ಪಡೆದುಕೊಳ್ಳುತ್ತೇನೆ. ಅದೇ ರೀತಿ ಈ ವರ್ಷವೂ ಬಂದಿದ್ದೇನೆ. ಆ ತಾಯಿಯಿಂದಲೇ ನಾವೆಲ್ಲ ಇದ್ದೀವಿ. ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆಯುತ್ತಿದೆ. ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಮೊದಲನೇ ಆಷಾಢ ಶುಕ್ರವಾರದ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಾಲಯದ ಒಳ, ಹೊರಾವರಣ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ. ನಸುಕಿನಲ್ಲೇ ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಹೀಗಾಗಿ ನೂಕು ನುಗ್ಗಲು ಉಂಟಾಗದಂತೆ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಆಷಾಢ ಮಾಸದ ಒಟ್ಟು 5 ಶುಕ್ರವಾರಗಳಲ್ಲೂ ಚಾಮುಂಡಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು, ಜನಪ್ರತಿನಿಧಿಗಳು, ಸಿನಿಮಾ ನಟರು ಪ್ರತಿ ಆಷಾಢ ಶುಕ್ರವಾರದಲ್ಲೂ ದೇವಿಯ ದರ್ಶನ ಪಡೆಯುತ್ತಾರೆ. ಹೀಗಾಗಿ ಮುಂಜಾನೆಯಿಂದ ರಾತ್ರಿವರೆಗೂ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.

Click to comment

Leave a Reply

Your email address will not be published. Required fields are marked *