ಬೆಂಗಳೂರು: ಮೈಸೂರಿನಲ್ಲಿ ಕಾರ್ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ನಟ ದರ್ಶನ್ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದಿದ್ದಾರೆ.
ದರ್ಶನ್ ಅವರು ಮೈಸೂರಿನ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನವನ್ನು ತಿಂಗಳಲ್ಲಿ ಒಮ್ಮೆಯಾದರು ಮಾಡುತ್ತಾರೆ. ಮೈಸೂರಲ್ಲಿ ಇರುವಾಗೆಲ್ಲ ದರ್ಶನ್ ಚಾಮುಂಡಿ ಮಾತೆಯ ದರ್ಶನ ಮಾಡಿಯೇ ವಾಪಸ್ಸಾಗುತ್ತಿದ್ದರು. ಅಷ್ಟೇ ಅಲ್ಲ ಪ್ರತಿ ವರ್ಷ ಆಷಾಢ ಶುಕ್ರವಾರಕ್ಕೆ ಚಾಮುಂಡೇಶ್ವರಿಯ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೊಸ ಕಾರು ಖರೀದಿಸಿದಾಗಲೂ ಅದನ್ನ ಚಾಮುಂಡಿ ಬೆಟ್ಟಕ್ಕೆ ತಂದು, ತಾಯಿ ದರ್ಶನ ಪಡೆದು ಪೂಜೆ ಮಾಡಿಸಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ಅವರು ನೇರವಾಗಿ ದೇವಸ್ಥಾನಕ್ಕೆ ಹೋಗಿ ತಾಯಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ.
ನಟ ದರ್ಶನ್ ಸೆಪ್ಟೆಂಬರ್ 24 ರಂದು ಮೈಸೂರಿಂದ ಬರುತ್ತಿದ್ದಾಗ ಕಾರ್ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ದರ್ಶನ್ ಅವರು ಬಲಗೈನ ಮೂಳೆ ಮುರಿದಿದ್ದು, ಸದ್ಯ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ.
ನಟ ದರ್ಶನ್ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯ ಮಾಧ್ಯಮಗಳ ಜೊತೆ ಮಾತನಾಡಿ, ದರ್ಶನ್ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಮೂಳೆ ಮುರಿದಿದೆ. ಕೆಲವು ದಿನಗಳು ವಿಶ್ರಾಂತಿ ಬೇಕಾಗುತ್ತದೆ. ಅವರು ನೋವನ್ನು ತಡೆದುಕೊಂಡು, ಅಭಿಮಾನಿಗಳಿಗೆ ಸ್ಪಂದಿಸಿದ್ದು ನೋಡಿ ಖುಷಿ ಆಯಿತು. ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv