ಕಾರವಾರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ (Darshan) ಅವರ ಅಕ್ಕ ಹಾಗೂ ಬಾವ ದೇವರ ಮೊರೆ ಹೋಗಿದ್ದಾರೆ. ದರ್ಶನ್‍ಗೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ಅವರ ಬಾವ ಮಂಜುನಾಥ್ (Manjunath), ಶನೇಶ್ವರನ ಮೊರೆ ಹೋಗಿದ್ದಾರೆ.
ಸದ್ಯ ದರ್ಶನ್ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಅವರು ಬೇರೆ ಬೇರೆ ಸಮಸ್ಯೆಗಳಿಗೂ ಸಿಕ್ಕಿಕೊಂಡಿದ್ದರಂತೆ. ಅದಕ್ಕೆಲ್ಲ ದರ್ಶನ್‍ಗೆ ಶನಿ ದೆಸೆಯೇ ಕಾರಣವಂತೆ. ಹೀಗಾಗಿ ದರ್ಶನ್ ಹಿರಿಯ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ್ ದೇವರ ಮೊರೆ ಹೋಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಕೈಗಾದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ರಾಮೇಶ್ವರ, ಆಂಜನೇಯ, ಶನೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಶನಿ ಶಾಂತಿ ಪೂಜೆ, ನವಗ್ರಹ ಪೂಜೆ, ಪುಷ್ಟಾರ್ಚನೆ ಮಾಡಿಸಿದ್ದಾರೆ. ಇದನ್ನೂ ಓದಿ: `ಡಿ’ಬಾಸ್ ಬಗ್ಗೆ ಮಾತಾಡಿದ್ರೆ ಜೀವಂತ ಸುಡೋದಾಗಿ ಬೆದರಿಕೆ – ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ವಶಕ್ಕೆ
ಈ ಬಗ್ಗೆ ಮಾತನಾಡಿರುವ ದೇವಾಲಯದ ಅರ್ಚಕ ಶ್ರೀಪಾದ್ ಭಟ್, ದರ್ಶನ್ ಮೇಲಿರುವ ದುಷ್ಟ ಶಕ್ತಿಗಳ ನಿವಾರಣೆ ಆದಷ್ಟು ಬೇಗ ಆಗಲಿ. ಆದಷ್ಟು ಬೇಗ ಪ್ರಕರಣದಿಂದ ಹೊರ ಬರಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಮನುಷ್ಯನಿಗೆ ಜೀವತಾವಧಿಯಲ್ಲಿ ಶನಿ ಪೀಡೆ ಎಂದು ಬರುತ್ತೆ. ಅಂತಹ ದೋಷಗಳಿದ್ದಾಗ ಆದಷ್ಟು ಬೇಗ ನಿವಾರಣೆ ಆಗಲಿ ಎಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಅಂತ ತಿಳಿಸಿದ್ದಾರೆ.
ದರ್ಶನ್ ಬಾವ ಮಂಜುನಾಥ್ ಸಹ ನವಗ್ರಹಗಳನ್ನು ಸುತ್ತಿ, ಈಶ್ವರನಿಗೆ ಹೂವಿನ ಹಾರ ಸಮರ್ಪಿಸಿ ಈಗ ಬಂದೊದಗಿದ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ ಮಾಡಿದರು. ಸದ್ಯ ಕೈಗಾ ಅಣು ಸ್ಥಾವರದಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರು. ದರ್ಶನ್ ಅವರನ್ನು ಬಾಲ್ಯದಿಂದ ಕಂಡವರು. ದರ್ಶನ್ ಅವರ ಹಿರಿಯ ಸಹೋದರಿ ದಿವ್ಯಾ ಅವರನ್ನು ವಿವಾಹವಾಗಿದ್ದು ದರ್ಶನ್‍ಗೆ ಸಹ ಅಕ್ಕ ಭಾವನ ಮೇಲೆ ಹೆಚ್ಚು ಪ್ರೀತಿ. ಹೀಗಾಗಿ ಈಗ ಬಂದೊದಗಿದ ಸಂಕಷ್ಟ ಪರಿಹಾರಕ್ಕೆ ದೇವರ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರಚೋದನೆ ಮಾಡಿ ಈ ಸ್ಥಿತಿಗೆ ತಂದಿದ್ದಾರೆ, ಒಳ್ಳೆತನ ಅವರನ್ನು ಕಾಪಾಡುತ್ತೆ: ದರ್ಶನ್ ಬಾವ ಮಂಜುನಾಥ್