ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ಬಂಧನವಾಗಿರುವ ನಟ ದರ್ಶನ್‌ಗೆ ಜುಲೈ 4ರ ವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ದರ್ಶನ್ (Darshan) ಸೇರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ನಾಲ್ವರು ಆರೋಪಿಗಳನ್ನೂ ಪೊಲೀಸರು ಬಿಗಿಭದ್ರತೆಯಲ್ಲಿ ಸೆಂಟ್ರಲ್ ಜೈಲಿಗೆ ರವಾನಿಸಿದ್ದಾರೆ.
ಇನ್ನೂ ಜೈಲಿನಲ್ಲಿ 6109 ಕೈದಿ ಸಂಖ್ಯೆ ಪಡೆದಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ (Parappana Agrahara Jail) ಮೊದಲ ದಿನ ಕಳೆದಿದ್ದಾರೆ. ಇದನ್ನೂ ಓದಿ: ಜು. 4 ರವರೆಗೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಜೈಲು
ʻಜಗ್ಗುದಾದಾʼ ಜೈಲು ದಿನಚರಿ ಹೇಗಿತ್ತು?
13 ವರ್ಷಗಳ ನಂತರ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಸೆಂಟ್ರಲ್ ಜೈಲ್‌ನಲ್ಲಿ ಮುದ್ದೆ ಮುರಿದಿದ್ದಾರೆ. ರಾತ್ರಿ ದರ್ಶನ್‌ಗೆ ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ನೀಡಲಾಗಿತ್ತು. ಆದ್ರೆ ಸರಿಯಾಗಿ ಊಟ ಮಾಡದ ದರ್ಶನ್ ತಡವಾಗಿಯೇ ನಿದ್ರೆಗೆ ಜಾರಿದ್ದಾರೆ. ಕಸ್ಟಡಿಯಲ್ಲಿ ಪೊಲೀಸ್ ವಿಚಾರಣೆಯಿಂದ ಹೈರಾಣಾಗಿದ್ದ ನಟ, ಮೊದಲ ದಿನ ಜೈಲೂಟ ಸರಿಯಾಗಿ ಮಾಡಲಾಗದೇ ತಡರಾತ್ರಿ ವರೆಗೂ ಮಂಕಾಗಿಯೇ ಕುಳಿತಿದ್ದರು. ರಾತ್ರಿ 11:30ರ ನಂತರ ನಿದ್ರೆಗೆ ಜಾರಿದ್ದಾರೆ ಎಂಬುದಾಗಿ ಎಂದು ಜೈಲರ್‌ವೊಬ್ಬರು ತಿಳಿಸಿದ್ದಾರೆ.
ಬೆಳಗ್ಗೆ 6:30ರ ವೇಳೆಗೆ ಎಚ್ಚರಗೊಂಡ ದರ್ಶನ್, ನಿತ್ಯಕರ್ಮ ಮುಗಿಸಿ, ಸೆಲ್‌ನಲ್ಲಿ ಕುಳಿತಿದ್ದಾರೆ, ದರ್ಶನ್ ಇರುವ ಅದೇ ಸೆಲ್‌ನಲ್ಲಿ ಸಹಖೈದಿ ವಿನಯ್ ಸೆರೆವಾಸ ಅನುಭವಿಸುತ್ತಿದ್ದಾರೆ. ಇಂದು (ಭಾನುವಾರ) ಜೈಲಿನ ಮೆನುವಿನ ಪ್ರಕಾರ ದರ್ಶನ್‌ಗೆ ಪಲಾವ್ ನೀಡಲಿದ್ದಾರೆ ಎಂದು ಜೈಲರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 13 ವರ್ಷಗಳ ನಂತರ ‘ದಾಸ’ ಮತ್ತೆ ಜೈಲುಪಾಲು!
ಜೈಲಿಗೆ ತೆರಳುವ ಮುನ್ನ ಆಗಿದ್ದೇನು?
ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ ಅಂತ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಕೂಡಿ ಹಾಕಿ, ಚಿತ್ರಹಿಂಸೆ ಕೊಟ್ಟು ಕೊಂದ ಕೇಸಲ್ಲಿ ದರ್ಶನ್‌ಗೆ 13 ದಿನ ನ್ಯಾಯಾಂಗ ಬಂಧನ ವಿಧಿಸಲಾಯಿತು. 24ನೇ ಎಸಿಎಂಎಂ ಕೋರ್ಟ್ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇಡಲಾಯಿತು. ಪತ್ನಿ ವಿಜಯಲಕ್ಷ್ಮಿ ಮೇಲೆ 2011ರಲ್ಲಿ ಹಲ್ಲೆ ಮಾಡಿದ್ದಾಗ 13 ವರ್ಷಗಳ ಹಿಂದೆ ಜೈಲು ಸೇರಿದ್ದರು. ಈಗ ಕೊಲೆ ಕೇಸಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಪ್ರಕರಣದ 17 ಜನ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಶನಿವಾರ ಮಧ್ಯಾಹ್ನ ಮಲ್ಲತಹಳ್ಳಿಯ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಕರೆತಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲೇ ದರ್ಶನ್, ಪ್ರದೋಶ್, ವಿನಯ್, ಧನರಾಜ್‌ಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಬಳಿಕ 4 ಗಂಟೆ ಸುಮಾರಿಗೆ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಈ ವೇಳೆ, ಎಲ್ಲಾ ಆರೋಪಿಗಳು ಒಟ್ಟಿಗೆ ಇದ್ದರೆ ಗಲಾಟೆ ಮಾಡಿಕೊಳ್ಳುವ, ಒಳಸಂಚು ಮಾಡುವ, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಅಂತ ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದರು. ಇದಕ್ಕೆ ದರ್ಶನ್ & ಗ್ಯಾಂಗ್ ಪರ ವಕೀಲರು ಆಕ್ಷೇಪಿಸಿದರು. ಆದರೆ, ಸೋಮವಾರ ಈ ಬಗ್ಗೆ ತೀರ್ಮಾನ ಮಾಡೋದಾಗಿ ಜಡ್ಜ್ ಹೇಳಿದರು. ಬಳಿಕ, ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಿಗಿಭದ್ರತೆಯಲ್ಲಿ ಸೆಂಟ್ರಲ್ ಜೈಲಿಗೆ ರವಾನಿಸಿದರು. ದರ್ಶನ್‌ಗೆ ಖೈದಿ ನಂಬರ್ 6109 ಕೊಡಲಾಗಿದೆ.