ಬೆಂಗಳೂರು: ಬಂಡೀಪುರದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚನ್ನು ತಡೆಯಲು ಅಭಿಮಾನಿಗಳಿಗೆ ಮನವಿ ಮಾಡಿದ್ದ ನಟ ದರ್ಶನ್, ಇಂದು ತಮ್ಮ ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದು ಅರಣ್ಯ ಬೆಳೆಸಲು ಕರೆ ನೀಡಿದ್ದಾರೆ.
ಪ್ರೀಮಿಯರ್ ಪದ್ಮಿನಿ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಚಿತ್ರತಂಡಕ್ಕೆ ಶುಭಕೋರಿದರು. ಇದೇ ವೇಳೆ ಅರಣ್ಯ ನಾಶದ ಬಗ್ಗೆ ದರ್ಶನ್ ಹಾಗೂ ಜಗ್ಗೇಶ್ ಇಬ್ಬರು ಕೂಡ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇಳೆ ಜಗ್ಗೇಶ್ ಅವರು ಒಂದು ಸಂಪಿಗೆ ಸಸಿ ಕೊಟ್ಟು ಸಂದೇಶ ನೀಡುವಂತೆ ದರ್ಶನ್ ಅವರಿಗೆ ಮನವಿ ಮಾಡಿದರು.
ಜಗ್ಗೇಶ್‍ರಿಂದ ಗಿಡ ಪಡೆದ ಬಳಿಕ ಮಾತನಾಡಿದ ದರ್ಶನ್ ಅವರು, ಗಿಡ ನೆಡುವುದು ಮುಖ್ಯವಲ್ಲ. ಅದರ ಪಾಲನೆ ಪೋಷಣೆ ಮುಖ್ಯ. ಗಿಡ ನೆಟ್ಟ ವೇಳೆ ಸೆಲ್ಫಿ ತೆಗೆದುಕೊಳ್ಳುವುದೇ ಅಲ್ಲ. ಗಿಡ ನೆಟ್ಟ ಮೇಲೆ ಪ್ರತಿ ವರ್ಷ ಅದರ ಬೆಳವಣಿಗೆ ಬಗ್ಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಎಂದು ಕರೆ ನೀಡಿದರು.
ನಗರದ ಶೆರ್ಟಾನ್ ಹೋಟೆಲ್ ನಲ್ಲಿ ಪ್ರೀಮಿಯರ್ ಪದ್ಮಿನಿ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ಮಾತನಾಡಿದ ನಟ ಜಗ್ಗೇಶ್ ಬಂಡೀಪುರ ಸೇರಿದಂತೆ ರಾಜ್ಯದ ಹಲವೆಡೆ ಅರಣ್ಯ ನಾಶದ ಪರಿಸ್ಥಿತಿ ಇದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಾಡ್ಗಿಚ್ಚಿನಂತಹ ಅವಘಡಗಳನ್ನು ತಡೆಯಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಬೆಲೆ ತೆರಬೇಕಾಗುತ್ತದೆ. ಎಲ್ಲರೂ ಕೂಡ ಅರಣ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗೋಣ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv