ಡಾಕ್ಟರ್ ಧನ್ಯತಾರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?- ಲವ್ ಸ್ಟೋರಿ ಬಿಚ್ಚಿಟ್ಟ ಡಾಲಿ

Public TV
2 Min Read
daali dhananjay

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ (Daali) ಇದೇ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧನ್ಯತಾ (Dhanyatha) ಅವರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ? ಇಬ್ಬರ ಪ್ರೀತಿಯ ಪಯಣ ಶುರುವಾಗಿದ್ದು ಯಾವಾಗ ಎಂಬುದನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಆ್ಯಂಕರ್ ಜಾನ್ವಿಯೀಗ ಅಧಿಪತ್ರದ ಅಧಿನಾಯಕಿ!

daali dhananjay 1

ಡಾಲಿ ಮಾತನಾಡಿ, ಮೊದಲಿಗೆ ಅಭಿಮಾನಿಯಾಗಿ ಧನ್ಯತಾ ಭೇಟಿ ಮಾಡಿದ್ದರು. ಆಗ ಅವರು ಇನ್ನೂ ಓದುತ್ತಿದ್ದರು. ಜಯನಗರ 4ನೇ ಬ್ಲಾಕ್‌ನಲ್ಲಿ ಮೊದಲಿಗೆ ಭೇಟಿ ಆಗಿದ್ದೆವು. ಅವತ್ತು ಉತ್ತರ ಕರ್ನಾಟಕ ಹೋಟೆಲ್‌ನಲ್ಲಿ ಊಟ ಮಾಡಿಸಿ ಮಾತನಾಡಿಸಿ ಕಳುಹಿಸಿದ್ದೆ ಎಂದು ಡಾಲಿ ಒಂದು ವರ್ಷದ ಹಿಂದಿನ ವಿಚಾರವನ್ನು ಸ್ಮರಿಸಿದ್ದಾರೆ. ಆ ಭೇಟಿ ಬಳಿಕ ಆಗಾಗ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದರು. ನನ್ನ ಸಿನಿಮಾ ಬಿಡುಗಡೆ ಆದಾಗ, ಪ್ರಶಸ್ತಿ ಬಂದಾಗ ಅಭಿನಂದನೆ ಹೇಳುತ್ತಿದ್ದರು. ನಾನು ಚೆನ್ನಾಗಿದ್ದೀನಿ ಡಾಕ್ಟರೇ ಎಂದು ಉತ್ತರಿಸಿ ಸುಮ್ಮನಾಗುತ್ತಿದ್ದೆ. ವರ್ಷದ ಹಿಂದೆ ಮತ್ತೆ ಭೇಟಿ ಮಾಡೋಣ ಅಂತ ಅನ್ನಿಸಿ ಭೇಟಿ ಮಾಡಿದ್ದೆ. ಆ ಬಳಿಕ ನಮ್ಮ ಜರ್ನಿ ಶುರುವಾಯಿತು. ಬಳಿಕ ಸ್ನೇಹಿತರಿಗೆ ಪರಿಚಯ ಮಾಡಿಸಿದೆ. ಅವರು ನಮ್ಮ ತಂದೆ ತಾಯಿಗೆ ಪರಿಚಯಿಸಿದರು ಎಂದು ಡಾಲಿ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. ನಮ್ಮ ತಂದೆ ಅವರ ಮನೆಯಲ್ಲಿ ಮಾತನಾಡಬೇಕು ಎಂದು ಹಿಂದೆ ಬಿದ್ದರು. ಹಾಗೆ ಮಾತನಾಡುತ್ತಾ ಮದುವೆವರೆಗೂ ಬಂದು ನಿಂತಿದೆ. ನಮ್ಮ ತಂದೆಗೆ ನಾನು ಡಾಕ್ಟರ್‌ ಆಗಬೇಕು ಎಂದು ಆಸೆಯಿತ್ತು. ಆದರೆ ಆಗಲಿಲ್ಲ. ಈಗ ಡಾಕ್ಟರೇ ಸೊಸೆಯಾಗಿ ಬರುತ್ತಿದ್ದಾರೆ. ಇನ್ನೂ ನಮ್ಮ ಅಜ್ಜಿಗೆ ಧನ್ಯತಾರನ್ನು ಭೇಟಿ ಮಾಡಿಸಿದ್ದೆ. ಅದು ಖುಷಿ ಇದೆ. ಈಗ ಅವರು ಇಲ್ಲ ಎಂದು ಡಾಲಿ ಹೇಳಿದ್ದಾರೆ.

Daali Dhananjaya Dhanyatha Engagement

ಡಾಲಿ ಭಾವಿ ಪತ್ನಿ ಮಾತನಾಡಿ, ಭೇಟಿಯಾದ ಬಳಿಕ ಅವರ ಆಲೋಚನೆ ರೀತಿ ಬಹಳ ಇಷ್ಟ ಆಯಿತು. ನಮ್ಮಿಬ್ಬರದ್ದು ಒಂದೇ ರೀತಿ ಇದೆ. ಧನಂಜಯ ಅವರ ಸಿಂಪ್ಲಿಟಿಸಿ ನನಗಿಷ್ಟ ಆಯ್ತು ಎಂದಿದ್ದಾರೆ. ಧನಂಜಯ ನನಗೆ ಹತ್ತಿರವಾದಂತೆ ಅವರ ಕುಟುಂಬದವರು ನನಗೆ ಹತ್ತಿರವಾದರು. ನಾನು ಸಿನಿಮಾಗಳಿಂದ ಕೊಂಚ ದೂರ. ಕಾರಣ ನನ್ನ ವೃತ್ತಿ ಹಾಗೆಯಿದೆ. ಇಷ್ಟು ದಿನ ಅಷ್ಟೇನು ಸಿನಿಮಾಗಳು ನೋಡಿರಲಿಲ್ಲ. ಈಗ ನೋಡುತ್ತಿದ್ದೇನೆ. ಧನಂಜಯ ನಟನೆಯ `ರತ್ನನ್ ಪ್ರಪಂಚ’ ಸಿನಿಮಾ ನನಗೆ ಬಹಳ ಇಷ್ಟ. ಅವರು ಪಾಸಿಟಿವ್, ನೆಗೆಟಿವ್ ಎರಡೂ ಪಾತ್ರಗಳನ್ನು ಚೆನ್ನಾಗಿ ಮಾಡ್ತಾರೆ. ನೆಗೆಟಿವ್ ಪಾತ್ರದಲ್ಲಿರುವ ಕ್ರೂರತೆಯನ್ನು ಒಬ್ಬ ನಟನಾಗಿ ಚೆನ್ನಾಗಿ ನಟಿಸಿ ತೋರಿಸುತ್ತಾರೆ ಎಂದು ಭಾವಿ ಪತಿಯ ನಟನೆಯನ್ನು ಹಾಡಿ ಹೊಗಳಿದ್ದಾರೆ.

Dolly Dhananjay

ಸರಳವಾಗಿ ಮದುವೆ ಆಗೋಣ ಎಂದುಕೊಂಡಿದ್ದೆ. ಆದರೆ ಆಮೇಲೆ ಸಾಕಷ್ಟು ಪ್ರಶ್ನೆಗಳು ಬರುತ್ತವೆ. ಮದುವೆ ಅಂದರೆ ಸಂಭ್ರಮ. ಹಾಗಾಗಿ ಸಂಭ್ರಮವಾಗಿರಲಿ ಎಂದು ನಿರ್ಧರಿಸಿದೆ. ಎಲ್ಲರೂ ಈಗಲೇ ಮದುವೆಗೆ ಹಾರೈಸುತ್ತಿರುವುದು ಬಹಳ ಖುಷಿಯಿದೆ ಎಂದು ಡಾಲಿ ಹೇಳಿದ್ದಾರೆ.

Dolly Dhananjay 2

ಇನ್ನೂ ಫೆ.15 ಮತ್ತು 16ರಂದು ಮೈಸೂರಿನಲ್ಲಿ ಡಾಲಿ ಹಾಗೂ ಧನ್ಯತಾ ಮದುವೆ ಜರುಗಲಿದೆ. ಯಶ್, ಶಿವಣ್ಣ, ಸುದೀಪ್, ಉಪೇಂದ್ರ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕರಿಗೆ ಡಾಲಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಫೆ.16ರಂದು ನಡೆಯಲಿರುವ ಮದುವೆಯಲ್ಲಿ ರಾಜಕೀಯ ಗಣ್ಯರು ಹಾಗೂ ಸಿನಿಮಾ ರಂಗದವರು ಭಾಗಿಯಾಗಲಿದ್ದಾರೆ.

Share This Article