– ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ; ಮೆನುವಿನಲ್ಲಿ ಏನೇನಿದೆ?
ಮೈಸೂರು: ನಟ ಡಾಲಿ ಧನಂಜಯ್ (Daali Dhananjay) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್ ಧನ್ಯತಾ ಅವರ ಜೊತೆ ನಟ ಡಾಲಿ ಹಸೆಮಣೆ ಏರಲಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಇಂದು ಸಂಜೆ ಆರತಕ್ಷತೆ, ನಾಳೆ ಧಾರಾ ಮುಹೂರ್ತ ಶುಭಕಾರ್ಯ ನಡೆಯಲಿದೆ. ಗಣ್ಯರು, ಸಿನಿ ತಾರೆಯರು, ಆಪ್ತರು ಡಾಲಿ ಮದುವೆಯಲ್ಲಿ ಪಾಲ್ಗೊಂಡು ಜೋಡಿಗೆ ಶುಭಹಾರೈಸುತ್ತಿದ್ದಾರೆ.
ಇಂದು ಬೆಳಗ್ಗೆಯಿಂದ ವಸ್ತುಪ್ರದರ್ಶನ ಮೈದಾನದಲ್ಲಿ ಹಲವು ಶಾಸ್ತ್ರಗಳು ನಡೆದವು. ಗಂಗೆ ತರೋ ಶಾಸ್ತ್ರ, ತಂದೆ-ತಾಯಿಯರ ವಾಗ್ದಾನ ಶಾಸ್ತ್ರ, ವಧು-ವರರ ನಿರೀಕ್ಷಣೆ ಶಾಸ್ತ್ರ ನಡೆಯಿತು. ಇದನ್ನೂ ಓದಿ: Photo Gallery: ಮೈಸೂರಲ್ಲಿ ನಟ ಡಾಲಿ ಧನಂಜಯ್ ಮದುವೆ ಸಂಭ್ರಮ
ಗೌರಿ ಪೂಜೆ, ಬಳೆ ಶಾಸ್ತ್ರ, ವಧು-ವರರ ಪ್ರಥಮ ಶಾಸ್ತ್ರ ಕೂಡ ನಡೆಯಿತು. ನಟ ಡಾಲಿ ಮತ್ತು ಡಾಕ್ಟರ್ ಧನ್ಯತಾ ಜೋಡಿ ಪರಸ್ಪರರು ಹೂವಿನ ಹಾರ ಬದಲಾಯಿಸಿಕೊಂಡರು. ಧನ್ಯತಾ ಅವರ ಕಾಲಿಗೆ ನಟ ಕಾಲುಂಗುರು ತೊಡಿಸಿದರು.
ಮದುವೆ ಸಂಭ್ರಮದಲ್ಲಿದ್ದ ನಟನಿಗೆ ‘ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ವಿಶ್ ಮಾಡಿದರು. ಇಂದು ಸಂಜೆ ಆರತಕ್ಷತೆ ಸಮಾರಂಭ ನಡೆಯಲಿದೆ. ಭಾನುವಾರ ಧಾರಾ ಮುಹೂರ್ತ ನಡೆಯಲಿದೆ. ಇದನ್ನೂ ಓದಿ: ಹಳದಿ ಶಾಸ್ತ್ರ ಸಂಭ್ರಮದಲ್ಲಿ ಮಿಂದೆದ್ದ ಡಾಲಿ ಧನಂಜಯ್, ಧನ್ಯತಾ ಜೋಡಿ
ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ
ಸಂಜೆ ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೋಳಿಗೆ, ತುಪ್ಪ, ಹೆಸರುಬೆಳೆ ಪಾಯಸ, ಸ್ವೀಟ್ ಕಾರ್ನ್ ಕೊಸುಂಬರಿ, ಕಡ್ಲೆಕಾಳು ಉಸ್ಲಿ, ಮಸಾಲ್ ದೋಸೆ, ಕಾಯಿ ಚಟ್ನಿ, ರುಮಾಲಿ ರೊಟ್ಟಿ, ಪನ್ನೀರ್ ಗ್ರೇವಿ, ಬೆಂಡೆಕಾಯಿ ಪ್ರೈ, ಮೆಣಸಿನಕಾಯಿ ಬಜ್ಜಿ, ವೆಜ್ ಬಿರಿಯಾನಿ ರಾಯತ, ಅನ್ನ, ತುಪ್ಪ, ಆಂಧ್ರ ಪಪ್ಪು, ತಿಳಿಸಾರು, ಮೊಸರು ಮೆನುವಿನಲ್ಲಿದೆ.
ಐದು ಕೌಂಟರ್ ಇದ್ದು, ಮಹಿಳೆಯರಿಗೆ ಪ್ರತ್ಯೇಕವಾದ ಕೌಂಟರ್ ಮಾಡಿದ್ದೇವೆ. ನಾಳೆ ಬೆಳಗ್ಗೆ ಟಿಫನ್ 5,000 ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 15,000 ಜನಕ್ಕೆ ಊಟದ ವ್ಯವಸ್ಥೆ ಮಾಡ್ತಿದ್ದೇವೆ. 170 ಜನ ಬಾಣಸಿಗರಿಂದ ಅಡುಗೆ ತಯಾರಿ ನಡೆಯುತ್ತಿದೆ. ಡಾಲಿ ಹಾಗೂ ಅವರ ಮನೆಯವರಿಗೆ ಹೋಳಿಗೆ ಊಟ ಹಾಕಿಸ್ಬೇಕು ಅಂತ ಆಸೆ ಇತ್ತು. ಹಾಗಾಗಿ ಹೋಳಿಗೆ ಸಿದ್ಧ ಮಾಡ್ತಿದ್ದೀವಿ ಎಂದು ಎಂಎನ್‌ಜೆ ಕ್ಯಾಟರಿಂಗ್ ಮಾಲೀಕ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೊಟ್ಟ ಗಿಫ್ಟ್