ಆದಿವಾಸಿಗಳ ಜೊತೆ ನಟ ಚೇತನ್ ಹೊಸ ವರ್ಷಾಚರಣೆ

Public TV
2 Min Read
mdk chethan collage copy

ಮಡಿಕೇರಿ: ಇಯರ್ ಎಂಡ್, ನ್ಯೂ ಇಯರ್ ಪಾರ್ಟಿಯನ್ನು ಗೆಳೆಯರ ಜೊತೆ, ಸಂಬಂಧಿಕರ ಜೊತೆ, ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಆದಿವಾಸಿ ಜನರು, ಮಕ್ಕಳ ಜೊತೆ ಸೇರಿ ಹೊಸ ವರ್ಷವನ್ನು ಆಚರಿಸಿದ್ದಾರೆ.

ಎರಡು ವರ್ಷದ ಹಿಂದೆ ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಆದಿವಾಸಿಗಳ ಹೋರಾಟ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಅರಣ್ಯ ಇಲಾಖೆಯವರು ಕಾಡಿನಲ್ಲಿ ನೈಸರ್ಗಿಕ ಜೀವನ ನಡೆಸುತ್ತಿದ್ದ ಮಂದಿಯನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಆ ವೇಳೆ ಆದಿವಾಸಿಗಳು ಮಾಡಿದ್ದ ಹೋರಾಟ ಕೊನೆಗೂ ಸರ್ಕಾರವನ್ನು ಮಂಡಿಯೂರುವಂತೆ ಮಾಡಿತ್ತು. ನಿರಂತರ ಹೋರಾಟದ ಫಲವಾಗಿ 528 ಮನೆಗಳು ನಿರ್ಮಾಣ ಹಂತದಲ್ಲಿದ್ದು, ಕೊನೆಗಾಲದಲ್ಲಾದರೂ ನಮ್ಮದೇ ಆದ ಸೂರು ಸಿಗುವಂತಾಗಬೇಕು ಎನ್ನುವ ಆದಿವಾಸಿಗಳ ಕನಸು ನನಸಾಗುತ್ತಿದೆ.

mdk chethan 3

ಸೋಮವಾರ ಸಂಜೆಯೇ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಬಳಿಯ ಬಸವನಹಳ್ಳಿಗೆ ಬಂದಿದ್ದ ನಟ ಚೇತನ್ ಇಯರ್ ಎಂಡ್ ಪಾರ್ಟಿಯನ್ನು ಆದಿವಾಸಿ ಜನರ ಜೊತೆ ಹಾಡಿ ಕುಣಿಯುವ ಮೂಲಕ ಸಂಭ್ರಮಿಸಿದರು. ಮಂಗಳವಾರ ಬೆಳಗ್ಗೆ ಬಸವನಹಳ್ಳಿಯ ಪಕ್ಕದ ಬ್ಯಾಡಗೊಟ್ಟದಲ್ಲಿರುವ ಆದಿವಾಸಿಗಳ ಜನರ ಜೊತೆ ಕಾಲ ಕಳೆದರು. ಮಕ್ಕಳಿಗೆ ಪುಸ್ತಕ ಪೆನ್ ನೀಡುವ ಮೂಲಕ ಚೆನ್ನಾಗಿ ಓದಬೇಕು ಅಂತಾ ಬುದ್ಧಿ ಮಾತು ಹೇಳಿದರು. ಎಲ್ಲರಿಗೂ ಬಟ್ಟೆಗಳನ್ನು ನೀಡುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆದಿವಾಸಿಗಳ ಮೊಗದಲ್ಲಿ ಕಾಣಿಸಿಕೊಳ್ಳುವಂತೆ ಚೇತನ್ ಮಾಡಿದರು.

mdk chethan 4 copy

ಆದಿವಾಸಿಗಳು ಯಾರೂ ಕೂಡ ನಟ ಚೇತನ್ ನಮ್ಮೊಂದಿಗೆ ಬಂದು ಹೊಸ ವರುಷವನ್ನು ಆಚರಿಸುತ್ತಾರೆ ಅಂತಾ ಭಾವಿಸಿರಲಿಲ್ಲ. ಹೊಸ ವರುಷಕ್ಕೆ ದಿಢೀರ್ ಸ್ಯಾಂಡಲ್ ವುಡ್ ನಟ ಬಂದಿದ್ದು ಹಾಡಿ ಜನರಿಗೆ ಅಚ್ಚರಿ ತರಿಸಿತ್ತು. ಚೇತನ್ ರೀಲ್ ಹೀರೋ ಅಲ್ಲ, ರಿಯಲ್ ಹೀರೋ. ನಮ್ಮ ಹೋರಾಟದ ಪ್ರಾರಂಭದ ದಿನಗಳಿಂದಲೂ ನಮ್ಮ ಜೊತೆ ನಿಂತುಕೊಂಡಿರುವುದು ನಮ್ಮಲ್ಲಿ ಹೆಚ್ಚಿನ ಆತ್ಮಸ್ಥೈರ್ಯ ಮೂಡಿಸಿದೆ ಅಂತಾ ಹಾಡಿನ ಜನ ನಟ ಚೇತನ್ ಅವರನ್ನು ಹೊಗಳಿದರು.

mdk chethan 5

ಹೊಸ ಮನೆಗಳು ನಿರ್ಮಾಣವಾಗ್ತಿರುವ ಬಡಾವಣೆಗೆ ಬಂದ ಚೇತನ್, ಜನರ ಜೊತೆ ಬೆರೆತು ಸಂತಸಪಟ್ಟರು. ಅಷ್ಟೇ ಅಲ್ಲದೇ ತಾತ್ಕಾಲಿಕವಾಗಿ ಹಾಕಿರುವ ಶೆಡ್ ಒಳಗೂ ಹೋಗಿ ಒಂದು ತಿಂಗಳ ಹಸುಗೂಸನ್ನು ನೋಡಿ, ತಾಯಿ ಮಗುವಿನ ಯೋಗಕ್ಷೇಮ ವಿಚಾರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *