ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ನಿನ್ನೆಯಿಂದ ಕಾಂಗ್ರೆಸ್ ಮತ್ತು ಇತರರ ಮೇಲೆ ಮುಗಿಬಿದ್ದಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿ ಅಥವಾ ರೋಹಿತ್ ಚಕ್ರತೀರ್ಥ ಕುರಿತಂತೆ ಮೆದು ಧೋರಣೆ ತೋರುತ್ತಿದ್ದಾರೆ ಎನ್ನುವಂತೆ ಪೋಸ್ಟ್ ಮಾಡಿದ್ದಾರೆ. ಚೇತನ್ ಈ ನಡೆ ಭಾರೀ ಕುತೂಹಲ ಮತ್ತು ಚರ್ಚೆಯನ್ನುಂಟು ಮಾಡಿದೆ. ಚೇತನ್ ಕಾಂಗ್ರೆಸ್ ಪರ ಎಂದು ಹೇಳುತ್ತಿದ್ದವರಿಗೂ ಈ ಅಚ್ಚರಿಯ ನಡೆ ಗೊಂದಲವನ್ನುಂಟು ಮಾಡಿದೆ.
ಇಂದು ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿಂಬಾಲಕರು ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಪ್ರಗತಿಪರ ಮನಸ್ಸುಗಳು ಕೂಡ ಈ ಹೋರಾಟಕ್ಕೆ ಕೈ ಜೋಡಿಸಿವೆ. ಈ ಬೆನ್ನಲ್ಲೇ ಚೇತನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಬರಹಗಳು ಮಹತ್ವ ಪಡೆದುಕೊಂಡಿವೆ. ಚೇತನ್ ಯಾರ ಪರ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿವೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?
ಮೂರು ಗಂಟೆಯ ಹಿಂದೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಚೇತನ್“ ಸಿದ್ಧರಾಮಯ್ಯನವರು ಚಕ್ರತೀರ್ಥನ ಬಂಧನಕ್ಕೆ ಆಗ್ರಹ ನೀಡಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ವಿರೋಧಿಯಾಗಿದ್ದು, ಅಸಾಂವಿಧಾನಿಕವಾಗಿದೆ. ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವವನ್ನು ನಾಶಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಎಂದಿನಂತೆ ಅಪಮಾನಿಸುವುದನ್ನು ಮುಂದುವರೆಸಿದೆ” ಎಂದು ಬರೆದುಕೊಂಡಿದ್ದಾರೆ.
ಮತ್ತೆ ಎರಡು ಗಂಟೆಯ ಹಿಂದೆ ಮತ್ತೊಂದು ಪೋಸ್ಟ್ ಮಾಡಿದ್ದು, “ಇವತ್ತಿನ ಪಠ್ಯಪುಸ್ತಕ ಪ್ರತಿಭಟನೆ ಸಮಾನತೆ ಮತ್ತು ನ್ಯಾಯಪರ ಹೋರಾಟ ಅಲ್ಲ. ಇದು ಕಾಂಗ್ರೆಸ್ ಮತ್ತು ಬ್ರಾಹ್ಮಣ್ಯದ ಸವಲತ್ತುಗಳನ್ನು ಉಳಿಸಿಕೊಳ್ಳುವ ಹೋರಾಟ. ಕಾಂಗ್ರೆಸ್ ಬೆಂಬಲಿತ ಪಠ್ಯಪುಸ್ತಕಗಳು, ಬಿಜೆಪಿ ಬೆಂಬಲಿತ ಪ್ರಸ್ತುತ ಪಠ್ಯಪುಸ್ತಗಳು ಎರಡರಲ್ಲೂ ನಿಜವಾದ ಸಮಾನತಾವಾದಕ್ಕೆ ನ್ಯಾಯ ಒದಗಿಸಿಲ್ಲ’ ಎಂದು ಚಾಟಿ ಬೀಸಿದ್ದಾರೆ.