‘ರಾಧಾ ರಮಣ’ (Radha Ramana) ಸೀರಿಯಲ್ ನಟಿ ಪವಿತ್ರಾ ಜಯರಾಂ (Pavitra Jayaram) ಕಾರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಟ ಚಂದು ಗೌಡ (Chandu Gowda) ಅವರು ಮಂಡ್ಯದ ಉಮ್ಮಡಹಳ್ಳಿಗೆ ಆಗಮಿಸಿ ಸಹನಟಿ ಪವಿತ್ರಾ ಅಂತಿಮ ದರ್ಶನ ಪಡೆದರು. ಈ ವೇಳೆ, ಪವಿತ್ರಾ ಜೊತೆಗಿನ ಒಡನಾಟದ ಬಗ್ಗೆ ಚಂದು ಗೌಡ ಮಾತನಾಡಿದ್ದರು.
ಪವಿತ್ರಾ ಸಾವಿನ ಸುದ್ದಿ ನಿಜಕ್ಕೂ ನೋವು ಕೊಟ್ಟಿದೆ. ‘ತ್ರಿನಯನಿ’ (Trinayani) ಸೀರಿಯಲ್‌ನಲ್ಲಿ 5 ವರ್ಷಗಳ ಕಾಲ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಮನೆಗಿಂತ ನಾವು ಜಾಸ್ತಿ ಸೆಟ್‌ನಲ್ಲಿ ಜೀವನ ಮಾಡಿದ್ವಿ. ತಿಂಗಳಲ್ಲಿ 15 ದಿನ ನಾವು ಹೈದರಾಬಾದ್‌ನಲ್ಲಿ ಕೆಲಸ ಮಾಡಿದ್ದೇವೆ. ಪವಿತ್ರಾ ಜೊತೆ ಉತ್ತಮ ಒಡನಾಟ ಇತ್ತು. ಅವರು ಬೇರೆ ಅಲ್ಲ, ನಮ್ಮ ಮನೆಯವರು ಬೇರೆ ಅಲ್ಲ. ಇಷ್ಟು ಹತ್ತಿರದವರು ತೀರಿಕೊಂಡಾಗ ಅದು ಬೇರೇ ತರಹನೇ ನೋವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಅಂತ ದೇವರಲ್ಲಿ ಕೇಳಿ ಕೇಳುತ್ತೇನೆ ಎಂದು ಕಿರುತೆರೆ ನಟ ಚಂದು ಗೌಡ ಭಾವುಕರಾಗಿದ್ದಾರೆ.
ದೇವರು ಇಷ್ಟು ಚಿಕ್ಕ ವಯಸ್ಸಿಗೆ ಅವರನ್ನು ಕರೆದುಕೊಂಡು ಬಿಟ್ಟರು. ಅವರ ಸಾವು ನಾವು ನಿರೀಕ್ಷೆ ಮಾಡಿರಲಿಲ್ಲ. ಸಾಕಷ್ಟು ಸಮಯದಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈಗ ಅವರು ಇಲ್ಲ ಅಂದರೆ ಬೇಸರವಾಗುತ್ತೆ. ಆಕ್ಸಿಡೆಂಟ್ ಆದಾಗ ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬರಲಿಲ್ಲ. ಈಗ ಅವರೇ ಇಲ್ಲ ಅಂದಾಗ ಯಾರನ್ನು ದೂರಿ ಏನು ಉಪಯೋಗ ಎಂದು ಪವಿತ್ರಾ ಅಂತಿಮ ದರ್ಶನ ಪಡೆದ ವೇಳೆ ಚಂದು ಗೌಡ ಮಾತನಾಡಿದ್ದಾರೆ. ಇದನ್ನೂ ಓದಿ:ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ
ಇತ್ತೀಚೆಗೆ ಮದರ್ಸ್ ಡೇಗೆ ಎಂದು ಕಾರ್ಯಕ್ರಮ ಮಾಡಿದ್ವಿ. ಎಷ್ಟು ಚೆನ್ನಾಗಿ ಕುಣಿದಿದ್ವಿ. ಆಕ್ಟ್ ಮಾಡಿದ್ವಿ ಎಂದು ಪವಿತ್ರಾ ಜೊತೆಗಿನ ಒಡನಾಟವನ್ನು ಚಂದು ಗೌಡ ವಿವರಿಸಿದ್ದರು.
ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಕಾರು ನಿನ್ನೆ (ಮೇ 12) ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿತ್ತು. ಇಂದು (ಮೇ 13) ಹುಟ್ಟುರಾದ ಉಮ್ಮಡಹಳ್ಳಿಯಲ್ಲಿ ಪವಿತ್ರಾ ಅಂತ್ಯಕ್ರಿಯೆ ನೆರವೇರಿದೆ.