ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಗಲಾಟೆಯ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಒಂದು ತಿಂಗಳ ಹಿಂದೆ ನಟ ಚಂದನ್ ಮೇಲೆ ಹಲ್ಲೆ ಮಾಡುವ ಈ ವಿಡಿಯೋ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿ ಬಂದಿದ್ದವು. ಸ್ವತಃ ಚಂದನ್ ಅವರೇ ಧಾರಾವಾಹಿಯ ಕ್ಯಾಮೆರಾಮನ್ ಮತ್ತು ಕ್ಯಾಮೆರಾಮನ್ ಸಹಾಯಕನಿಗೆ ಹೊಡೆದರು, ಆನಂತರ ಸೆಟ್ ನಲ್ಲಿ ಗಲಾಟೆ ನಡೆಯಿತು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಗಲಾಟೆ ಆಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು ಆದರೆ, ಅಲ್ಲಿ ಹೊಡೆದಾಟ ನಡೆದಿಲ್ಲ. ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದಿದ್ದಾರೆ. ‘ಈ ಘಟನೆ ನಡೆದಾಗ ನನ್ನ ತಾಯಿಯು ಅನಾರೋಗ್ಯದಲ್ಲಿದ್ದರು. ನಾನು ಟೆನ್ಷನ್ ನಲ್ಲಿದ್ದೆ. ಈ ಸಮಯದಲ್ಲಿ ಕ್ಯಾಮೆರಾಮನ್ ಸಹಾಯಕ ನನ್ನ ಸಹಾಯಕನಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದ. ನಾನು ಆ ಹುಡುಗನಿಗೆ ಹಾಗೆ ಮಾತನಾಡುವುದು ತಪ್ಪು ಎಂದು ತಳ್ಳಿದ್ದೆ. ಇದರ ಹೊರತಾಗಿ ಅಲ್ಲಿ ಏನೂ ನಡೆದಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ:ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್
ಆದರೆ, ವಿಡಿಯೋದಲ್ಲಿ ಇರುವುದು ಬೇರೆಯಾಗಿದೆ. ಶೂಟಿಂಗ್ ಸ್ಥಗಿತಗೊಳಿಸಿ ಚಂದನ್ ಅವರನ್ನು ಸುತ್ತುವರೆದಿದ್ದಾರೆ. ವಾತಾವರಣ ಬಿಸಿಯಾಗಿದೆ. ಚಂದನ್ ಮತ್ತು ಅಲ್ಲಿ ನೆರೆದಿದ್ದವರ ಮಧ್ಯ ಮಾತಿನ ಚಕಮಕಿ ಕೂಡ ನಡೆದಿದೆ. ಕ್ಷಮೆ ಕೇಳಲು ಕೆಲವರು ಚಂದನ್ ಅವರನ್ನು ಒತ್ತಾಯಿಸುತ್ತಾರೆ. ಈ ಮಧ್ಯೆ ಅಲ್ಲಿ ನಿಂತದ್ದ ಒಬ್ಬನು ಚಂದನ್ ಅವರ ಮುಖಕ್ಕೆ ಹೊಡೆಯುತ್ತಾನೆ. ಇಷ್ಟೆಲ್ಲ ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಅಂದಹಾಗೆ ಚಂದನ್ ಅವರು ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಅವರು ಈ ಹಿಂದೆ ಲಕ್ಷ್ಮೀ ಬಾರಮ್ಮ, ‘ರಾಧಾ ಕಲ್ಯಾಣ’, ‘ಸರ್ವ ಮಂಗಳ ಮಾಂಗಲ್ಯೇ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಲವ್ ಯು ಅಲಿಯಾ, ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ” ಸೇರಿ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ’ ಮರಳಿ ಮನಸಾಗಿದೆ ‘ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.