ಕೌಟುಂಬಿಕ ದೌರ್ಜನ್ಯ ಅಡಿಯಲ್ಲಿ ನಟಿ ಸೆಲಿನಾ ಜೇಟ್ಲಿ (Celina Jaitly) ಪತಿ ವಿರುದ್ಧ ದೂರು ದಾಖಲಿಸಿ 50 ಕೋಟಿ ರೂ. ಪರಿಹಾರ ಕೋರಿದ್ದಾರೆ. ಆಸ್ಟ್ರಿಯಾ ದೇಶದ ಉದ್ಯಮಿ ಪೀಟರ್ ಹಾಗ್ ಜೊತೆ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ 2011ರಲ್ಲಿ ವಿವಾಹವಾಗಿದ್ದರು. ಇದೀಗ ನವೆಂಬರ್ 21 ರಂದು ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ (Domestic Violence Case) ದಾಖಲಿಸಿ ಭಾರಿ ಮೊತ್ತದ ಪರಿಹಾರ ಕೇಳಿದ್ದಾರೆ.
ಬಾಲಿವುಡ್‌ನ ನೋ ಎಂಟ್ರಿ, ಅಪ್ನಾ ಸಪ್ನಾ ಮನಿ ಮನಿ, ಮನಿ ಹೈ ತೋ ಹನಿ ಹೈ, ಗೋಲ್ಮಾಲ್ ರಿಟರ್ನ್ಸ್, ಥ್ಯಾಂಕ್ ಯೂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು ಸೆಲಿನಾ. ಕನ್ನಡದ ಶ್ರೀಮತಿ ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸಿದ್ದ ಸೆಲಿನಾ ಜೇಟ್ಲಿ ಮದುವೆಯಾಗಿ ವಿದೇಶದಲ್ಲಿ ಪತಿಯೊಂದಿಗೆ ವಾಸವಾಗಿದ್ದರು. ಸೆಲಿನಾ ಹಾಗೂ ಪೀಟರ್ ಹಾಗ್ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಪತಿ ವಿರುದ್ಧ ಗಂಭೀರ ಆರೋಪ ಮಾಡಿರುವ ನಟಿ, `ಪೀಟರ್ ಹಾಗ್ ಓರ್ವ ಸ್ವಾರ್ಥಿಯಾಗಿದ್ದು, ಮಕ್ಕಳ ಬಗ್ಗೆ ಯಾವುದೇ ಸಹಾನುಭೂತಿ ಹೊಂದಿಲ್ಲ, ಪತಿಯಿಂದ ತೀವ್ರವಾಗಿ ಭಾವನಾತ್ಮಕ, ದೈಹಿಕ, ಮೌಖಿಕ ನಿಂದನೆಯನ್ನು ಅನುಭವಿಸಿದ್ದೇನೆ’ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಅವರು ಆಸ್ಟಿçಯಾದಲ್ಲಿರುವ ತಮ್ಮ ಮನೆಯಿಂದ ಪಲಾಯನ ಮಾಡಿ ಭಾರತಕ್ಕೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ.
ಅಂದಹಾಗೆ ಕಳೆದ ಆಗಸ್ಟ್ನಲ್ಲಿ ಸೆಲಿನಾ ಪತಿ ಪೀಟರ್ ಹಾಗ್ ಆಸ್ಟಿçಯಾದ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರಂತೆ. ಇದೀಗ ಸೆಲಿನಾ ಪತಿಯ ವಿರುದ್ಧ ಗಂಭೀರ ಆರೋಪವೆಸಗಿದ್ದಾರೆ.

