ಬೆಂಗಳೂರು: ಸಿನಿಮಾ ಸ್ಟಾರ್ ಗಳು ಸಾಮಾನ್ಯವಾಗಿ ತಮ್ಮ ಅಪ್ಪ ಅಮ್ಮನಿಗೆ ಹುಟ್ಟುಹಬ್ಬಕ್ಕಾಗಿ ಉಡುಗೊರೆ ಕೊಡುತ್ತಾರೆ. ಅದರಲ್ಲೂ ಉಡುಗೊರೆಯಾಗಿ ಬೈಕ್, ಕಾರ್, ಚಿನ್ನ ಈ ರೀತಿ ದುಬಾರಿಯ ಉಡುಗೊರೆಯನ್ನು ಕೊಡುತ್ತಾರೆ. ಆದರೆ ನಟ ಅರ್ಜುನ್ ಸರ್ಜಾ ಅವರಿಗೆ ಅವರ ಮಕ್ಕಳು ನೀಡಿದ ಗಿಫ್ಟ್ ನೋಡಿ ಆಶ್ಚರ್ಯ ಪಟ್ಟಿದ್ದಾರೆ.
ಇತ್ತೀಚೆಗಷ್ಟೆ ನಟ ಅರ್ಜುನ್ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಸರ್ಜಾ ಇಬ್ಬರು ಸೇರಿ ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಏನಾದರು ಉಡುಗೊರೆ ಕೊಡಬೇಕು ಎಂದು ಯೋಚಿಸಿ ಒಂದು ಅಪರೂಪದ ಗಿಫ್ಟ್ ನೀಡಿದ್ದಾರೆ.
ನಟ ಅರ್ಜುನ್ ಸರ್ಜಾ ಅವರ ಮಕ್ಕಳು ಪ್ರೀತಿಯಿಂದ ತಮ್ಮ ತಂದೆಗೆ ಒಂದು ಹಸುವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಪ್ಪನಿಗಾಗಿ ನೀಡಿರುವ ಹಸುವನ್ನು ಗುಜರಾತಿನಿಂದ ತೆಗೆದುಕೊಂಡು ಬರಲಾಗಿದೆ ಎಂದು ತಿಳಿದು ಬಂದಿದೆ. ಮಕ್ಕಳು ನೀಡಿರುವ ಉಡುಗೊರೆಯನ್ನು ನೋಡಿ ಒಂದು ಕ್ಷಣ ಅರ್ಜುನ್ ಸರ್ಜಾ ಅವರು ಆಶ್ಚರ್ಯ ಪಟ್ಟು, ಬಳಿಕ ಸಂತಸ ಪಟ್ಟಿದ್ದಾರೆ.
ಅರ್ಜುನ್ ಸರ್ಜಾ ಅವರು ಮಕ್ಕಳು ಕೊಟ್ಟಿರುವ ಹಸುವಿನ ಜೊತೆ ಮತ್ತು ಕುಟುಂಬದವರ ಜೊತೆ ಸಂತಸದಿಂದ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ “ನಮ್ಮ ಮಕ್ಕಳು ನನಗಾಗಿ ನೀಡಿರುವ ಉಡುಗೊರೆ ಇದು. ಈ ರೀತಿ ಉಡುಗೊರೆ ನೀಡುತ್ತಾರೆ ಎಂದು ನಾನು ನಿಜವಾಗಿಯೂ ಊಹಿಸಿರಲಿಲ್ಲ. ನಿಜಕ್ಕೂ ಇದು ಅತ್ಯುತ್ತಮ ಉಡುಗೊರೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.
ಅರ್ಜುನ್ ಸರ್ಜಾ ಅವರು ಬಾಲ್ಯದಿಂದಲೂ ಸಿನಿಮಾದಲ್ಲಿ ಅಭಿನಯಿಸಿದ್ದು, ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳು ಐಶ್ವರ್ಯ ‘ಪ್ರೇಮ ಬರಹ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.