ಬೆಂಗಳೂರು: ನಟ ಅನಿರುದ್ಧ್ ಈವೆರೆಗೆ ಎಲೆ ಮರೆಯ ಕಾಯಿಯಂತೆ ಇದ್ದರು. ಬೆಳ್ಳಿ ತೆರೆ ಮೇಲೆ ಮಿಂಚಲು ಅವರಿಗೆ ಅಷ್ಟೇನು ಅವಕಾಶಗಳು ಒಲಿದಿರಲಿಲ್ಲ. ಆದರೆ ಕಿರುತೆರೆಯ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ. ಇದೀಗ ಅವರಿಗಾಗಿಯೇ ಫ್ಯಾನ್ ಕ್ಲಬ್ ಕೂಡ ಕ್ರಿಯೇಟ್ ಆಗಿದೆ. ಇದೆಲ್ಲದರ ಮಧ್ಯೆ ಅನಿರುದ್ಧ್ ಅವರು ಆಗಾಗ ಬರೆಯುವುದನ್ನೂ ರೂಢಿಸಿಕೊಂಡಿದ್ದಾರೆ, ಹಾಗೇ ಸಾಮಾಜಿಕ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ. ಅದರ ಭಾಗವಾಗಿ ಇದೀಗ ಅವರು ಪ್ರಧಾನಿ ಮೋದಿಗೆ ಇ-ಮೇಲ್ ಮಾಡುವ ಮೂಲಕ ಒಂದು ಮನವಿ ಮಾಡಿದ್ದಾರೆ.
ಹೌದು, 94 ವರ್ಷದ ನಿವೃತ್ತ ಯೋಧನಿಗೆ ಮನೆ ಇಲ್ಲ ಎನ್ನುವುದನ್ನು ಮನಗಂಡ ಅನಿರುದ್ಧ್, ಈ ಕುರಿತು ಲೇಖನ ಬರೆದಿದ್ದರು. ಮಾತ್ರವಲ್ಲದೆ ಈ ಕುರಿತು ಗಮನ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಇ-ಮೇಲ್ ಮಾಡಿದ್ದಾರೆ. ಈ ಮೂಲಕ ನಿವೃತ್ತ ಯೋಧನ ಕಷ್ಟಕ್ಕೆ ಮಿಡಿದಿದ್ದಾರೆ.
https://www.instagram.com/p/B9YceghHFjX/
ನಟ ಅನಿರುದ್ಧ್ ಅವರು ಮೇಲ್ ಮಾಡಿರುವ ಪ್ರತಿಯನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಪ್ರಧಾನ ಮಂತ್ರಿ ಅವರಿಗೆ ಮೇಲ್ ಮಾಡಿದ್ದೇನೆ. ಕಾರ್ಯನಿರ್ವಹಣೆ ಆಗುತ್ತೆ ಎನ್ನುವ ಆಶಯ’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಗ್ರೇಟ್ ದಾದಾ ತುಂಬಾ ಹೆಮ್ಮೆಯೆನಿಸುತ್ತೆ. ಭಾರತ ಹಾಗೂ ಸೈನ್ಯದ ಮೇಲಿರುವ ನಿಮ್ಮ ಅಭಿಮಾನಕ್ಕೆ ನಮ್ಮ ಕೋಟಿ ಕೋಟಿ ನಮನಗಳು’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿ, ಸರ್ ರಿಪ್ಲೈ ಮಾಡ್ತಾರೆ…ಗ್ರೇಟ್ ವರ್ಕ್ ದಾದಾ, ನಿಮ್ಮ ಒಳ್ಳೆಯ ಕಾರ್ಯಗಳನ್ನು ಹೀಗೆ ಮುಂದುವರಿಸಿ. ನಾನು ನಿಮ್ಮ ದೊಡ್ಡ ಅಭಿಮಾನಿ, ಹಾಗೇ ಜೊತೆ ಜೊತೆಯಲಿ ಧಾರಾವಾಹಿಯನ್ನು ಸಹ ತಪ್ಪದೆ ನೋಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಹಲವರು ಹಲವು ರೀತಿಯ ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಅಂದಹಾಗೆ ಅನಿರುದ್ಧ್ ಅವರು ಯಾರಿಗಾಗಿ ಮೇಲ್ ಮಾಡಿದ್ದಾರೆ ಎಂಬುದನ್ನು ಕೇಳಿದರೆ ಖಂಡಿತ ನೀವು ಒಂದು ಕ್ಷಣ ಆಶ್ಚರ್ಯಕ್ಕೊಳಗಾಗುತ್ತೀರಿ. ಹೌದು ಅವರು ಬರೆದಿರುವುದು ಬೇರೆ ಯಾರಿಗಾಗಿಯೂ ಅಲ್ಲ ನೇತಾಜಿ ಸುಭಾಶ್ ಚಂದ್ರ ಭೋಸ್ 1943ರಲ್ಲಿ ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದ 94 ವರ್ಷದ ನಿವೃತ್ತ ಸೈನಿಕ ಸಿ.ಎಂ.ಪಾಂಡಿಯಾರಾಜ್ ಅವರ ಬಗ್ಗೆ.
ಸ್ವಾತಂತ್ರ್ಯಕ್ಕಾಗಿ ಸುಭಾಶ್ ಚಂದ್ರ ಭೋಸ್ ಅವರು ಕಟ್ಟಿದ ಸೇನೆಯಲ್ಲಿ ಭಾಗವಹಿಸಿ, ಹೋರಾಡಿದ ನಿವೃತ್ತ ಸೈನಿಕ ಪಾಂಡಿಯಾ ಅವರದ್ದು ಮನ ಕಲುಕುವ ಕಥೆ. ಅವರಿಗೆ 94 ವರ್ಷಗಳಾದರೂ ವಾಸಿಸಲು ಒಂದು ಮನೆ ಇಲ್ಲ. ಈಗಲೂ ಅವರು ತಮಿಳುನಾಡಿನ ರಾಮನಾಥಪುರಂನಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಈ ಕುರಿತು ತಿಳಿದ ಅನಿರುದ್ಧ್ ಅವರು ಅವರಿಗೆ ಸೂರು ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಇ-ಮೇಲ್ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಲಿದೆಯೇ ಕಾದು ನೋಡಬೇಕಿದೆ.