ಪೈರಲ್ಲೂ ಅಭಿಮಾನ ತೋರಿದ ಅಂಬಿ ಫ್ಯಾನ್

Public TV
2 Min Read
MND FAN copy

ಮಂಡ್ಯ: ದಿವಂಗತ ಹಿರಿಯ ನಟ ಅಂಬರೀಶ್ ಇರುವವರೆಗೂ ಆರಾಧಿಸಿ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದ ಮಂಡ್ಯ ಜಿಲ್ಲೆಯ ಜನ ಅವರು ಇಹಲೋಕ ತ್ಯಜಿಸಿದ ಮೇಲೂ ಅಷ್ಟೇ ಅಭಿಮಾನವನ್ನ ಇಟ್ಟುಕೊಂಡಿದ್ದಾರೆ. ಮಂಡ್ಯ ತಾಲೂಕಿನ ಯುವ ರೈತನೊಬ್ಬ ತಾನು ನಾಟಿ ಮಾಡಲು ಬಿತ್ತನೇ ಹಾಕಲಾಗಿರುವ ಭತ್ತದ ಪೈರಿನಲ್ಲೇ ಮತ್ತೆ ಹುಟ್ಟಿ ಬಾ ಅಂಬರೀಶಣ್ಣ ಎಂದು ಬರೆಯುವ ಮೂಲಕ ಅಂಬಿಯ ಅಭಿಮಾನ ಮೆರೆದಿದ್ದಾನೆ.

vlcsnap 2019 02 14 07h07m35s558

ಮಂಡ್ಯ ತಾಲೂಕಿನ ಮತ್ತಹಳ್ಳಿ ನಿವಾಸಿ ಹರ್ಷಿತ್ ವಿಭಿನ್ನ ರೀತಿಯಲ್ಲಿ ಅಭಿಮಾನ ತೋರಿದ ಅಂಬರೀಶ್ ಅಭಿಮಾನಿ. ಈತ ಒಂದು ಎಕರೆಯಲ್ಲಿ ಭತ್ತದ ಪೈರಿನ ಬಿತ್ತನೆ ಮಾಡಲಾಗಿದೆ. ಚಿಕ್ಕಂದಿನಿಂದಲೂ ಅಂಬರೀಶ್ ಅವರ ಕಟ್ಟ ಅಭಿಮಾನಿಯಾಗಿದ್ದ ಹರ್ಷಿತ್, ಅಂಬರೀಶ್ ಅವರು ನಿಧನ ಹೊಂದಿದ್ದ ಸಮಯದಲ್ಲಿ ಸಾಕಷ್ಟು ನೊಂದಿದ್ದರು. ಅಣ್ಣ ನಮ್ಮನ್ನ ಬಿಟ್ಟು ಹೋದರಲ್ಲ ಎಂದು ಕಣ್ಣೀರು ಸುರಿಸಿದ್ದರು. ಹೀಗಾಗಿಯೇ ಅವರನ್ನ ಮರೆಯಲಾಗದೆ ಅವರ ಮೇಲಿನ ಅಭಿಮಾನವನ್ನ ವಿಭಿನ್ನವಾಗಿ ತೋರಿಸಬೇಕೆಂದುಕೊಂಡಿದ್ದ ಹರ್ಷಿತ್ ಮತ್ತು ಅವರ ಸಹೋದರರು ಕಳೆದ 20 ದಿನದ ಹಿಂದೆ 1 ಎಕರೆ ಗದ್ದೆಯನ್ನ ಭತ್ತ ನಾಟಿ ಮಾಡುವ ಉದ್ದೇಶದಿಂದ ಪೈರನ್ನ ಬಿತ್ತನೆ ಹಾಕಿದ್ದಾರೆ. ಹೀಗೆ 6 ಕೆಜಿ ಭತ್ತ ತಂದು ಗದ್ದೆಯನ್ನ ಹೃದಯಾಕಾರದಲ್ಲಿ ಸಿದ್ಧಗೊಳಿಸಿ ಮತ್ತೆ ಹುಟ್ಟಿ ಬಾ ಅಂಬರೀಶಣ್ಣ ಎಂದು ಬರೆದಿದ್ದಾರೆ.

vlcsnap 2019 02 14 07h08m01s046

ಭತ್ತದ ಪೈರು ಬಿತ್ತನೆ ಹಾಕಿ ಈಗ 20ದಿನ ಕಳೆದಿರುವುದು ಸೊಗಸಾಗಿ ಬೆಳೆದು ನಿಂತಿದೆ. ಗದ್ದೆಯ ನಡುವೆ ಹಸಿರಿನಿಂದ ಬರೆಯಲಾಗಿರುವ ಮತ್ತೆ ಹುಟ್ಟಿ ಬಾ ಅಂಬರೀಶಣ್ಣ ಎಂಬ ಬರಹ ಈಗ ಸಾಕಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ. ಹೀಗಾಗಿಯೇ ಹರ್ಷಿತ್ ಗ್ರಾಮದವರು ಮಾತ್ರವಲ್ಲದೆ ಸುತ್ತಮುತ್ತಲ ಹಳ್ಳಿಗಳಿಂದಲೂ ಜನರು ಬಂದು ನೋಡಿ ಹರ್ಷಿತ್ ಅವರ ಅಭಿಮಾನವನ್ನ ಹೊಗಳುತ್ತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲ ತಾಣದಲ್ಲೂ ವೈರಲ್ ಆಗಿದ್ದು, ಅಂಬಿ ಪತ್ನಿ ಸುಮಲತಾ ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನ ಈ ವಿಚಾರ ತಿಳಿಯುತ್ತಿದ್ದಂತೆ ಹರ್ಷಿತ್ ಅವರ ಜಮೀನಿನ ಬಳಿಗೆ ಆಗಮಿಸಿ ನಾನು ಹರ್ಷಿತ್ ಮತ್ತು ಅವರ ಸಹೋದರನ್ನ ಅಭಿನಂದಿಸಿದ್ದೇವೆ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದ್ದಾರೆ.

ಅಂಬರೀಶ್ ಅವರು ಇಹಲೋಕ ಬಿಟ್ಟ ನಂತರ ನಡೆಯುವ 11 ನೇ ದಿನದ ಕಾರ್ಯಕ್ರಮದಲ್ಲಿ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಅಭಿಮಾನ ಮೆರೆದಿದ್ದ ಹರ್ಷಿತ್, ರಾಜು ಕಾಳಪ್ಪ ಹಾಗೂ ದಿಲೀಪ್ ಸಹೋದರರು ಈಗ ಗದ್ದೆಯಲ್ಲಿ ಭತ್ತದ ಪೈರಿನಲ್ಲಿ ಅಂಬರೀಶ್ ಅವರ ಹೆಸರನ್ನ ಬರೆಯುವ ಮೂಲಕ ಮತ್ತೊಮ್ಮೆ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *